ಪಶ್ಚಿಮ ಬಂಗಾಳದಲ್ಲಿ ಪಟಾಕಿ ಕಾರ್ಖಾನೆಗೆ ಬೆಂಕಿ ; 7 ಮಂದಿ ಸಾವು
ಪಶ್ಚಿಮ ಬಂಗಾಳ: ಮನೆಯೊಂದರಲ್ಲಿ ಅಕ್ರಮವಾಗಿ ಪಟಾಕಿ ಕಾರ್ಖಾನೆಯನ್ನಾಗಿ ಬಳಸುತ್ತಿದ್ದ ಸ್ಥಳದಲ್ಲಿ ಸ್ಪೋಟ ಸಂಭವಿಸಿ ಕನಿಷ್ಟ 7 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಬರಾಸತ್‌ನ ದತ್ತ ಪುಕೂರ್‌ನಲ್ಲಿರುವ ಮನೆಯಲ್ಲಿ ಅನುಮತಿಯಿಲ್ಲದೆ ಪಟಾಕಿ ಉತ್ಪಾದನೆಗೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಈ ಸಂದರ್ಭ ಏಕಾಏಕಿ ಸ್ಪೋಟ ಸಂಭವಿಸಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆಯನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬರಾಸತ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸ್ಥಳೀಯರು, ದತ್ತಪುಕರ್‌ನ ನೀಲ್‌ಗುಂಜ್ ಪ್ರದೇಶದಲ್ಲಿ ಬೆಳಿಗ್ಗೆ 10.40ರ ಸುಮಾರಿಗೆ ಎರಡು ಅಂತಸ್ತಿನ ಮನೆಯೊಳಗೆ ಸ್ಫೋಟ ಸಂಭವಿಸಿದೆ. ಅಕ್ರಮವಾಗಿ ಮನೆಯಲ್ಲಿ ಪಟಾಕಿ ಕಾರ್ಖಾನೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಪ.ಬಂಗಾಳದ ಆಹಾರ ಸಚಿವ ಮತ್ತು ಸ್ಥಳೀಯ ಶಾಸಕ ರಥಿನ್ ಘೋಷ್ ಹೇಳಿದ್ದಾರೆ.
ನಾನು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಇದು ಪಟಾಕಿ ತಯಾರಿಸುವ ಪ್ರದೇಶವಲ್ಲ. ನೀಲ್‌ಗುಂಜ್‌ನ ನಾರಾಯಣಪುರ ಪ್ರದೇಶವು ಮುಖ್ಯ ಪಟಾಕಿ ಉತ್ಪಾದನಾ ಕೇಂದ್ರವಾಗಿದೆ. ನಾರಾಯಣಪುರದಲ್ಲಿರುವ ಎಲ್ಲಾ ಪಟಾಕಿ ಘಟಕಗಳನ್ನು ಪೊಲೀಸರು ಮುಚ್ಚಿದ್ದರು ಎಂದು ಸಚಿವ ಘೋಷ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

