ಸೌಜನ್ಯ ಅತ್ಯಾಚಾರ ಆರೋಪಿಗೆ ಶಿಕ್ಷೆ ಆಗಲೆಂದು ಉಡುಪಿಯಲ್ಲಿ ಉರುಳು ಸೇವೆ
ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿ ” ಕೊರಗಜ್ಜ ಕೊರಗಜ್ಜ” ಎಂದು ಹುಚ್ಚನಂತೆ ಅಲೆಯಲಿ: ಉರುಳು ಸೇವೆ ಮೂಲಕ ಪ್ರಾರ್ಥನೆ.
ಉಡುಪಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಕೊರಗಜ್ಜ ಕೊರಗಜ್ಜ ಎಂದು ರಸ್ತೆಯಲ್ಲಿ ಹುಚ್ಚನಂತೆ ಅಲೆದಾಡಲಿ ಎಂದು ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಉರುಳು ಸೇವೆಯ ಪ್ರಾರ್ಥಿಸಿ ಮೂಲಕ ಪೂಜೆ ಸಲ್ಲಿಸಲಾಯಿತು.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹೋರಾಟದ ಕಿಚ್ಚು ಕರಾವಳಿಯಲ್ಲಿ ಜೋರಾಗಿದ್ದು, ಮರು ತನಿಖೆಗೆ ಆಗ್ರಹಿಸಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.
ಹಲವು ಕಡೆಗಳಲ್ಲಿ ದೈವ ದೇವರಿಗೆ ಮೊರೆ ಹೋಗುವ ಮೂಲಕ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಇಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಂದ ವಿಶೇಷ ಉರುಳು ಸೇವೆಯ ಕಾರ್ಯಕ್ರಮ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಕೊರಗಜ್ಜ ದೈವಸ್ಥಾನದಲ್ಲಿ ನಡೆಯಿತು.
ಮೊದಲು ಪ್ರಾರ್ಥನೆ ಸಲ್ಲಿಸಿದ ನಿತ್ಯಾನಂದ ಒಳಕಾಡು, ಬಳಿಕ ಸೌಜನ್ಯಾಳ ಭಾವ ಚಿತ್ರ ಹಿಡಿದು ಉರುಳು ಸೇವೆ ನಡೆಸಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸೌಜನ್ಯಾಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಪ್ರತಿಭಟನೆಗಳು ನಡೆಯುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ. ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು. ಇದಕ್ಕಾಗಿ ಉರುಳು ಸೇವೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇನೆ. ಆರೋಪಿ ಯಾರೆಂಬುದು ಪತ್ತೆ ಆಗಬೇಕು. ಆರೋಪಿಯೇ ಮುಂದೆ ಬಂದು ತಪ್ಪೊಪ್ಪಿಕೊಳ್ಳಬೇಕು. ಇಲ್ಲವಾದರೆ ಕೊರಗಜ್ಜ, ಕೊರಗಜ್ಜ ಎಂದು ಹುಚ್ಚನಂತೆ ತಿರುಗಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ನಿತ್ಯಾನಂದ ಒಳಕಾಡುವವರ ವಿಶೇಷ ಉರುಳು ಸೇವೆಗೆ ದೈವಸ್ಥಾನದ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ರಿಕ್ಷಾ ಚಾಲಕರು, ಸ್ಥಳೀಯ ನಾಗರಿಕರು ಸಾಥ್ ನೀಡಿದರು.
