ಕಾಪು: ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರು ಮತ್ತು ಹೇರೂರು ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಿದ್ದು ಗ್ರಾಮಸ್ಥರು ತೀವ್ರ ಆತಂಕಿತರಾಗಿದ್ದಾರೆ.
ಪಾದೂರು ಐಎಸ್‌ಪಿಆರ್‌ಎಲ್, ಸಿಎಸ್‌ಐ ಚರ್ಚ್, ಹೇರೂರು ಮತ್ತು ವಳದೂರುದಲ್ಲಿ ಚಿರತೆ ಓಡಾಡುತ್ತಿದ್ದು ಈ ಪರಿಸರದಲ್ಲಿ ಜನ ಓಡಾಡಲು ಹೆದರುವಂತಾಗಿದೆ.ಸೋಮವಾರ ರಾತ್ರಿ ಪಾದೂರು ಚರ್ಚ್ ಹಿಂಬದಿಯಲ್ಲಿರುವ ವಯೋವೃದ್ಧ ಜಾರ್ಜ್ ಬಂಗೇರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು ಭಯದಿಂದಲೇ ಮನೆಯವರು ರಾತ್ರಿಯಿಡೀ ನಿದ್ದೆ ಬಿಟ್ಟು ಎಚ್ಚರದಿಂದಲೇ ಕುಳಿತುಕೊಳ್ಳುವಂತಾಗಿತ್ತು. ಬುಧವಾರ ಬೆಳಿಗ್ಗೆ ಹೇರೂರು ನಿವಾಸಿ ವಿದ್ಯಾ ಪ್ರಭು ಅವರು ಹೂವು ಕೊಯ್ಯುತ್ತಿದ್ದಾಗ ಚಿರತೆ ಗುಟುರು ಹಾಕಿದ್ದು ತತ್‌ಕ್ಷಣ ಓಡಿ ತಪ್ಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಭಯಭೀತಿಯಿಂದ ಬದುಕಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು. ಪಾದೂರು, ಕೂರಾಲು, ವಳದೂರು, ಹೇರೂರು ಪರಿಸರದಲ್ಲಿ ಚಿರತೆ ಹಾವಳಿಯಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ.
ಕಾಪು ತಾಲೂಕು ವ್ಯಾಪ್ತಿಯಲ್ಲಿ ಒಂದೇ ಬೋನು ಇದ್ದು ಸಮಸ್ಯೆ ಉಂಟಾಗಿದೆ. ಸದ್ಯ ಕುರ್ಕಾಲು ಪರಿಸರದಲ್ಲಿ ಇರಿಸಲಾಗಿದ್ದ ಬೋನನ್ನು ಬುಧವಾರ ಸಂಜೆ ಪಾದೂರು-ಹೇರೂರು ಪರಿಸರದಲ್ಲಿ ತಂದು ಇರಿಸಲಾಗಿದೆ ಎಂದು ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ತಿಳಿಸಿದ್ದಾರೆ.

