ಪೋಷಕರು ಮಕ್ಕಳ ಬಗ್ಗೆ ಜಾಗೃತರಾಗುವ ಅವಶ್ಯಕತೆ ಇದೆ – ಡಾ. ಪ್ರಕಾಶ್ ಸಿ ತೋಳಾರ್
ಪಂಚವರ್ಣ ಮಹಿಳಾ ಮಂಡಲದ ಅರಿವು ನಿಮ್ಮಗಿರಲಿ ನೆರವು 8ನೇ ಮಾಲಿಕೆ
ಕೋಟ: ಪೋಷಕರು ಮಕ್ಕಳ ಬಗ್ಗೆ ಆಗಾಗ ಜಾಗೃತರಾಗುವ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ ಎಂದು ಪ್ರಸಿದ್ಧ ಮನೋವೈದ್ಯ ಡಾ. ಪ್ರಕಾಶ್ ಸಿ ತೋಳಾರ್ (Psychologist Dr. Prakash C Tholar) ಹೇಳಿದರು.
ಸೋಮವಾರ ಪಾಂಡೇಶ್ವರ ಸಹಕಾರ ಹಾಲು ಉತ್ಪಾದಕರ ಮಹಿಳಾ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಇದರ ಸಹಯೋಗದೊಂದಿಗೆ ಪಾಂಡೇಶ್ವರ ಸಹಕಾರ ಹಾಲು ಉತ್ಪಾದಕರ ಮಹಿಳಾ ಸಂಘದ ಸಂಯೋಜನೆಯೊಂದಿಗೆ ಹದಿಹರೆಯದವರಿಗೆ ಮಾಹಿತಿ ಅರಿವು ನಿಮ್ಮಗಿರಲಿ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಆಧುನಿಕ ಕಾಲಘಟಕ್ಕೆ ಒಗ್ಗಿಕೊಂಡಿದ್ದೇವೆ. ಅದರ ಒಳಿತು ಕೆಡುಕಿನ ಬಗ್ಗೆ ಅವಲೋಕಿಸುವ ಮನಸ್ಥಿತಿಯನ್ನು ಯಾರೋಬ್ಬರೂ ಅರ್ಥ ಮಾಡಿಕೊಳ್ಳದ ಸ್ಥಿತಿ ಎದುರಾಗಿದೆ.
ಪ್ರಸ್ತುತ ಮಕ್ಕಳು ಅತಿ ಹೆಚ್ಚು ಮೊಬೈಲ್ ಬಳಕೆ ಹಾಗೂ ಮಾದಕ ವ್ಯಸನಗೈಯುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಪೋಷಕರು ಜಾಗೃತರಾಗುವ ಅಗತ್ಯತೆ ಇದೆ. ಹಿಂದಿನ ಕಾಲಘಟ್ಟದಲ್ಲಿ ಹಿರಿಯರ ಭಯ ಭಕ್ತಿಯಲ್ಲಿ ಬದುಕಿ ಸಂಸ್ಕಾರವಂತರಾಗಿ ಬದುಕಿ ಇತರರಿಗೆ ಮಾದರಿ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ಆದರೆ ಈಗಿನ ಸನ್ನಿವೇಶಗಳನ್ನು ನೋಡಿದರೆ ನಾವು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಎದುರಾಗಿದೆ. ಈ ಎಲ್ಲಾ ವಿಚಾರಗಳನ್ನು ಪ್ರತಿಯೊರ್ವರೂ ಯೋಚಿಸಿ ಜಾಗೃತ ಸಮಾಜ ನಿರ್ಮಿಸಲಿ ಎಂದರು.
ಪಂಚವರ್ಣ ಸಂಸ್ಥೆ ಸಾಮಾಜಿಕ ಪ್ರಜ್ಞೆ ಕಾಳಜಿ ಕಾರ್ಯಕ್ರಮ ಪ್ರಶಂಶನೀಯ. ಇನ್ನಷ್ಟು ಈ ರೀತಿಯ ಸಂಘಗಳು ಹುಟ್ಟಿಕೊಂಡು ಲೋಕದ ಶ್ರೇಯಸ್ಸಿಗೆ ಶ್ರಮಿಸಲಿ ಎಂದು ಪ್ರಕಾಶ್ ಸಿ ತೋಳಾರ್ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತೆ ವೈದ್ಯೆ ಡಾ. ವಾಣಿಶ್ರೀ ಐತಾಳ್ (Dr. Vani Sri Aital) ಮಾತನಾಡಿ, ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ,ಆಹಾರ ಹಾಗೂ ಜೀವನ ಕ್ರಮಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆ.ಎಂ. ಎಫ್ ವಿಸ್ತೀರ್ಣಾಧಿಕಾರಿ ಸರಸ್ವತಿ, ಪಾಂಡೇಶ್ಚರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಪಾಂಡೇಶ್ಚರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಾಂತಾ ಭಟ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು.
ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.
ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಿ.ಇ.ಓ ಶ್ಯಾಮಲ ವಂದಿಸಿದರು.

