ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು : ಕಾಪು ಶಾಸಕ ಗುರ್ಮೆ
ಕಾಪು ಪುರಸಭೆಯ ಮಾಸಿಕ ಸಭೆ, ಇಂದಿರಾ ಕ್ಯಾಂಟೀನ್ ಗೆ ಸಿಸಿ ಕ್ಯಾಮರ ಏಕೆ? : ಪ್ರಶ್ನೆ
(Kaup) ಕಾಪು : ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗೆ ಕಾಪು ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸದಸ್ಯರು ಜನಪರ ಕಾರ್ಯಗಳಿಗೆ ಒತ್ತು ನೀಡಬೇಕೆಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ಪುರಸಭೆಯ ಸಾಮಾನ್ಯ ಸಭೆಯು ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಜರಗಿದ್ದು, ಶಾಸಕರು ಮಾತನಾಡಿದರು.
ಪ್ರಾಧಿಕಾರದಿಂದ ಕೆರೆ, ಮೈದಾನ, ಪಾಕ್೯, ವಾಕಿಂಗ್ ಟ್ರ್ಯಾಕ್ ಗಳ ನಿರ್ಮಾಣಕ್ಕೆ ಅವಕಾಶವಿದೆ. ಸರಕಾರಿ ಜಾಗವಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗದೆ ರಸ್ತೆಗೆ ಜಾಗ ನೀಡಿ ಸಾರ್ವಜನಿಕರ ಸೇವೆ ಮಾಡುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿವಿ ಮಾತು ಹೇಳಿದರು.
ನೀರು ಸರಬರಾಜು ದುರಸ್ತಿ ಕಾರ್ಯ ಮಾಡುವವರು ನೀರು ಪೋಲಾಗುವ ಬಗ್ಗೆ ಗಮನಹರಿಸಬೇಕು. ಬ್ಯಾನರ್ ಅಳವಡಿಕೆಯ ಕರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ, ರಸ್ತೆಗೆ ಅಡ್ಡಿಯಾಗಿ ಬ್ಯಾನರ್ ಅಳವಡಿಕೆ, ಬೀಡು ಬದಿಯ ಕೆರೆಗೆ ಕಾಯಕಲ್ಪ ನೀಡುವ ಬಗೆಯೂ ಕ್ರಮ ವಹಿಸಬೇಕೆಂದು ಸದಸ್ಯ ಅನಿಲ್ ಕುಮಾರ್ ಆಗ್ರಹಿಸಿದರು.
ಸದಸ್ಯ ಅಮೀರ್ ಮಾತನಾಡಿ, ಪೌರ ಕಾರ್ಮಿಕರೇ ತ್ಯಾಜ್ಯ ಸಂಗ್ರಹ ವಾಹನದ ಚಲಾಯಿಸುವ ಬಗ್ಗೆ, ಪುರಸಭೆ ರಚನೆಯಾಗಿ ಹತ್ತು ವರ್ಷವಾದರೂ ಎಸ್ಟಿಪಿ ತುರ್ತಾಗಿ ರಚಿಸಬೇಕು ಎಂದರು.
ನಾಮನಿರ್ದೇಶಿತ ವಿಪಕ್ಷ ಸದಸ್ಯ ಅಮೀರ್ ರವರು ಖಾಸಗಿ ಸಂಕೀರ್ಣದ ಅತಿಕ್ರಮಿತ ಸರಕಾರಿ ಜಾಗದ ಬಗ್ಗೆ ಮಾತನಾಡಿದಾಗ, ಶಾಸಕರು ಗಟ್ಟಿ ದನಿಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ಸದಸ್ಯರೆಲ್ಲರೂ ಜೊತೆಯಾಗಿ ಅಮೀರ್ ಮಾತನ್ನು ವಿರೋಧಿಸಿದಾಗ ವಾಕ್ಸಮರ ಉಂಟಾಗಿತ್ತು. ಈ ಸಂದರ್ಭ ವಿಪಕ್ಷ ಸದಸ್ಯರು ಮೌನವಾಗಿದ್ದುದು ಸಂಶಯಕ್ಕೆ ಎಡೆ ಮಾಡಿದೆ.
ಇಂದಿರಾ ಕ್ಯಾಂಟೀನ್ ಗೆ ಸಿಸಿ ಕ್ಯಾಮರದ ಅವಶ್ಯಕತೆ ಇದೆಯೇ? ತಿಂಡಿ ಯಾರಾದರೂ ಕದಿಯುತ್ತಾರೆ ಎಂದು ಭಯವೇ?, ಕಾಪುವಿನಲ್ಲಿ ಕೆಎಸ್ಆರ್ಟಿಸಿ ನಿಲ್ಲಿಸುವ ಬಗ್ಗೆ, ಪುರಸಭಾ ವ್ಯಾಪ್ತಿಯ ಸರಕಾರಿ ಜಾಗದ ಸರ್ವೇ ನಡೆಸಬೇಕೆಂದು, ಹುಚ್ಚು ನಾಯಿ ನಿಯಂತ್ರಣ ಮಾಡಲು ಕ್ರಮ, ಸಂತೆ ವ್ಯಾಪಾರಿಗಳಿಂದ ಅಧಿಕ ಕರ ಸಂಗ್ರಹ, ತಡವಾಗಿ ಕಚೇರಿಗೆ ಆಗಮಿಸುವ ಸಿಬ್ಬಂದಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ನಿರ್ಣಯವಾದರೂ ಕೆಲಸ ಆಗುತ್ತಿಲ್ಲ. ಅಧಿಕಾರಿ ವರ್ಗದವರು ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ ಎಂಬ ಕೊರಗಿನ ಜೊತೆಗೆ ಸದಸ್ಯರ ನಡುವೆ ವೈಯಕ್ತಿಕ ಮಾತೂ ಹರಿದಾಡಿತು.
ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಂದರ್ಭ ಪ್ರಭಾರ ಪುರಸಭಾ ಮುಖ್ಯಾಧಿಕಾರಿ ಶಶಿಕಲಾ, ಪುರಸಭಾ ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಉಪಸ್ಥಿತರಿದ್ದರು.

