ಪ್ರಚಾರಕ್ಕಾಗಿ ಆರ್‌ಎಸ್‌ಎಸ್‌ನ್ನು ಟೀಕಿಸಬೇಡಿ : ಜಯನ್ ಮಲ್ಪೆ
ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ 69ನೇ ಪರಿನಿಬ್ಬಾಣದ ಪ್ರಯುಕ್ತ ನಡೆದ ಕಾರ್ಯಕ್ರಮ
(Malpe) ಮಲ್ಪೆ: ನೂರು ವರ್ಷ ಇತಿಹಾಸ ಇರುವ ಆರ್‌ಎಸ್‌ಎಸ್ ಭಾರತವನ್ನು ಆಳುವ ವರ್ಗವಾಗುವಲ್ಲಿ ಯಶಸ್ಸುಕಂಡಿದೆ. ಆದರೆ ಐವತ್ತು ವರ್ಷದ ಇತಿಹಾಸ ಇರುವ ದಲಿತ ಚಳುವಳಿ ಐನೂರು ಗುಂಪುಗಳಾಗಿ ವಿಘಟನೆ ಹೊಂದಿ ಈ ಬಗ್ಗೆ ದಲಿತ ನಾಯಕರು ಯೋಚಿಸುವದನ್ನು ಬಿಟ್ಟು ಪ್ರಚಾರಕ್ಕಾಗಿ ಆರ್‌ಎಸ್‌ಎಸ್‌ನ್ನು ಟೀಕಿಸುವುದು ಸರಿಯಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ 69ನೇ ಪರಿನಿಬ್ಬಾಣದ ಪ್ರಯುಕ್ತ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಕ್ಯಾಂಡಲ್ ಮೆರವಣಿಗೆಯ ಸಮಾರೋಪದಲ್ಲಿ ಮಾತನಾಡಿದರು.
ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕಣವನ್ನು ಇಂದು ವ್ಯಾಪಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕ್ಷಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ. ಅಂಬೇಡ್ಕರ್‌ರವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ದಲಿತ ಚಳುವಳಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಮಹಾಬಲ ಕುಂದರ್, ಸತೀಶ್ ನಾಯ್ಕ, ರಮೇಶ್ ತಿಂಗಳಾಯ, ವೆಂಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ, ಮಾಧವ ಬನ್ನಂಜೆ , ಸತೀಶ್ ಕೊಡವೂರು, ಸುದರ್ಶನ್ ಪಡುಕರೆ, ಯಾದವ ಅಮೀನ್ ಕೊಳ, ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಮೀನಗರ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಕೃಷ್ಣಶ್ರೀಯಾನ್, ಸುಮಿತ್ ನೆರ್ಗಿ, ಗುಣವಂತ ತೋಟ್ಟಂ, ಭಗವಾನ್, ವಿನಯ ಬಲರಾಮನಗರ, ಸತೀಶ್ ಕಪ್ಪೆಟ್ಟು, ದೀಪಕ್, ಸಂದ್ಯಾಕೃಷ್ಣ, ಪೂರ್ಣಿಮ ಸಂದ್ಯಾತಿಲಕ್, ಪ್ರಮೀಳ, ಶಶಿಕಲಾ ತೊಟ್ಟಂ, ವಿನಯ ಕೊಡಂಕೂರು, ವಿನೋದ ಮುಂತಾದವರು ಭಾಗವಹಿಸಿದ್ದರು.

