ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿಎನ್ ಡಿ ಆರ್‌ಎಫ್ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮ
ವಿಪತ್ತುಗಳ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸ್ಪಂಧಿಸಬಹುದು : ಡಾ. ನಾಗರಾಜ್ ಭಟ್
(Bantakal) ಬಂಟಕಲ್, ಫೆ. 14: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, 10ನೇ ಬೆಟಾಲಿಯನ್ ಹಾಗೂ ಉಡುಪಿ ಜಿಲ್ಲಾ ವಿಪತ್ತುನಿರ್ವಹಣಾ ಪ್ರಾಧಿಕಾರ ಇದರ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆ ಎನ್‌ಡಿಆರ್‌ಎಫ್ ಪರಿಚಯ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಮತ್ತು ಸಮುದಾಯದವರಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳು, ತುರ್ತು ಪ್ರಕ್ರಿಯೆ ವಿಧಾನಗಳು ಮತ್ತು ಜೀವ ರಕ್ಷಣೆ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಮಾತನಾಡಿ, ಯುವ ಜನರಲ್ಲಿ ಸುರಕ್ಷತೆ ಮತ್ತು ಸಿದ್ಧತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ವಿಪತ್ತುಗಳ ಸಂದರ್ಭದಲ್ಲಿ ಪರಿಣಾಮಕಾರಿ ಪ್ರತಿಕ್ರಿಯೆ ನೀಡಬಲ್ಲ ಜವಾಬ್ಧಾರಿಯುತ ನಾಗರೀಕರಾಗಿ ರೂಪುಗೊಳ್ಳಬೇಕೆಂದರು.
ಉಡುಪಿ ಉಪ ಆಯುಕ್ತರ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞರಾದ ರವಿ ಅವರು ಮಾತನಾಡಿ, ವಿಪತ್ತುಗಳ ಸಂದರ್ಭದಲ್ಲಿ ಸಿದ್ಧತೆ ಮತ್ತುತುರ್ತು ಕ್ರಮಗಳ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಉಪ ನಿರೀಕ್ಷಕರಾದ ಮುನ್ನಿಕೃಷ್ಣನ್ ಹಾಗೂ ಉಪನ್ಯಾಸಕರಾದ ಯಲ್ಲಪ್ಪರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
10ನೇ ಬೆಟಾಲಿಯನ್, ಆರ್‌ಆರ್‌ಸಿ ಬೆಂಗಳೂರು ಘಟಕದ ಕಮಾಂಡರ್ ಅಜಯ್ ಕುಮಾರ್ ಅವರ ನೇತೃತ್ವದಲ್ಲಿಎನ್ ಡಿ ಆರ್‌ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆಯ ವಿಧಾನಗಳು, ಸ್ಥಳಾಂತರ ತಂತ್ರಗಳು ಹಾಗೂ ಆಧುನಿಕ ವಿಪತ್ತು ಪ್ರತಿಕ್ರಿಯೆಯ ಸಾಧನಗಳ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪ್ರವಾಹ ಅಗ್ನಿಅವಗಢ ಹಾಗೂ ಭೂಕಂಪದಂತಹಾ ತುರ್ತು ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಭಾಗವಹಿಸಿದವರಿಗೆ ನೈಜ ಅನುಭವದ ಮೂಲಕ ತಿಳುವಳಿಕೆ ದೊರಕಿತು.
ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ. ಸುಬ್ಬುಲಕ್ಷ್ಮೀ ಎನ್ ಕಾರಂತ್ ರವರು ಸಂಯೋಜಿಸಿದರು.
ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ದೀಪಿಕಾ ಬಿ ವಿ ಕಾರ್ಯಕ್ರಮ ನಿರೂಪಿಸಿದರು.

