ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ : ಸಯೀದ್ ಇಸ್ಮಾಯಿಲ್
(Kaup) ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ಮೂಡಿ, ಮುಂದೆ ಅವರು ಸಮಾಜದಲ್ಲಿ ದುಷ್ಟರಾಗಿ ಬೆಳೆಯಲು ಕಾರಣವಾಗುತ್ತದೆ. ತಮ್ಮ ಮಕ್ಕಳು ಒಳ್ಳೆಯವರಾಗಬೇಕಿದ್ದಲ್ಲಿ, ಹೆತ್ತವರು ಕೂಡಾ ಒಳ್ಳೆಯವರಾಗಬೇಕಾಗುತ್ತದೆ. ಮಕ್ಕಳ ಮುಂದೆ ತಂದೆ, ತಾಯಿ, ಸಹೋದರ, ಸಹೋದರಿಯರು ಜಗಳವಾಡುತ್ತಿದ್ದರೆ, ಮಕ್ಕಳ ಮೇಲೆ ಅದರ ದುಷ್ಪರಿಣಾಮ ಬೀರುತ್ತದೆ ಎಂದು ಜಮಾ ಆತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಜನಾಬ್ ಸಯೀದ್ ಇಸ್ಮಾಯಿಲ್‌ರವರು ಹೇಳಿದರು.
ಅವರು, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ ರಾಜ್ಯದ ವತಿಯಿಂದ ನಡೆದ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್‌ನ ಪರೀಕ್ಷೆಯಲ್ಲಿ, ಕಾಪು ಸೆಂಟರ್‌ನಲ್ಲಿ ಭಾಗವಹಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಪುವಿನ ಹೊಟೇಲ್ ಕೆ. ಒನ್‌ನಲ್ಲಿ ಜಮಾ ಆತೆ ಇಸ್ಲಾಮೀ ಹಿಂದ್ ವರ್ತುಲವು ಹಮ್ಮಿಕೊಂಡ, ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದರು.
ಹಲವು ಜ್ಞಾನ ಮನುಷ್ಯನಿಗೆ ಸ್ರಷ್ಟಿಕರ್ತನಿಂದ ದೊರಕುವ ಕಾರಣ ಆತ ಹೊಸ ಹೊಸ ಕೊಡುಗೆಗಳನ್ನು ಸಮಾಜಕ್ಕೆ ನೀಡುತ್ತಾನೆ. ಮೌಲ್ಯಧಾರಿತ ಶಿಕ್ಷಣವನ್ನು ನಾವು ಪಡೆದು ಅದನ್ನು ಸಮಾಜದಲ್ಲಿ ಕಾಪಾಡಿಕೊಂಡು ಬರುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದೂ ಜನಾಬ್ ಸಯೀದ್ ಇಸ್ಮಾಯಿಲ್‌ರವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖದೀಜ ಹುದಾ ರವರು ಮಾತನಾಡಿ, ಲೌಕಿಕ ವಿದ್ಯಾಭ್ಯಾಸ ಮನುಷ್ಯನ ಇಹಲೋಕದ ಜೀವನಕ್ಕೆ ಸಹಕಾರಿಯಾದರೆ, ಆದ್ಯಾತ್ಮಿಕ ಶಿಕ್ಷಣವು ಆತನ ಪರಲೋಕದ ಜೀವನಕ್ಕೆ ಸಹಕಾರಿಯಾಗುತ್ತದೆ. ಮಾನವನು ಇಹಲೋಕದ ಶಿಕ್ಷಣವನ್ನು ಪಡೆಯುವುದರೊಂದಿಗೆ, ಆಧ್ಯಾತ್ಮಿಕ ಶಿಕ್ಷಣವನ್ನೂ ಪಡೆದು ಇಹ ಮತ್ತು ಪರಲೋಕದ ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದರು.
ಜನಾಬ್ ಶಾನವಾಜ್ ರವರು ಮಾತನಾಡಿ, ಇಂದಿನ ಕಾಲದಲ್ಲಿ ಮನುಷ್ಯನು ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗುರುತರವಾದ ಸ್ಥಾನ ಮಾನ ಪಡೆದಿರುತ್ತಾನೆ. ಆದರೆ ಆತನು ಕುಟುಂಬದವರೊಂದಿಗೆ ನಿರ್ದಯಿ ಯಾಗಿ ವರ್ತಿಸುತ್ತಾನೆ. ವ್ರದ್ಧ ತಂದೆ, ತಾಯಿಯವರ ಸೇವೆ ಮಾಡದೆ, ಸಹೋದರಿಯರ ಹಕ್ಕು ಕೊಡದೆ ಶೋಷಿಸಿದರೆ ಅವರು ಪಡೆದ ವಿದ್ಯಾಭ್ಯಾಸಕ್ಕೆ ಯಾವುದೇ ಬೆಲೆ ಇರುವುದಿಲ್ಲವೆಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಶಭೀ ಅಹಮದ್ ಕಾಝಿ ಯವರು ಸಂದರ್ಭೋಚಿತವಾಗಿ ಮಾತಾಡಿದರು.
ಕಾರ್ಯಕ್ರಮವು ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು.
ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಯವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿ.ಐ.ಇ ಯ ವಿದ್ಯಾರ್ಥಿಗಳಿಗೆ ಸಯೀದ್ ಇಸ್ಮಾಯಿಲ್ ರವರು ಪ್ರಶಸ್ತಿ ಪ್ರದಾನ ಮಾಡಿ ಸರ್ಟಿಫಿಕೇಟ್ ವಿತರಿಸಿದರು.
ವಿದ್ಯಾರ್ಥಿಗಳ ಪಟ್ಟಿಯನ್ನು ಮಸ್ನಾ ಮುಳೂರು ವಾಚಿಸಿದರು.
ಎಸ್. ಐ. ಓ ನ ಸ್ಪರ್ಧೆಯ ವಿಜೇತರಿಗೆ ಶಭೀ ಅಹಮದ್ ಕಾಝಿ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮುಹಮ್ಮದ್ ಸೈಫ್ ರವರು ವಾಚಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶಾನವಾಜ್‌ರವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಅನ್ವರ್ ಅಲಿ ಮತ್ತು ಮಹಿಳಾ ವರ್ತುಲದ ಸಂಚಾಲಕಿ ಶೇಹೆನಾಜ್‌ರವರು ನೆನಪಿನ ಕಾಣಿಕೆ ನೀಡಿದರು.
ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು.
ಅಬ್ದುಲ್ ಖಾಲಿದ್‌ರವರು ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.

