ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನೆಗೆ ಭೇಟಿ, ಸನ್ಮಾನ
ರಕ್ಷಿತಾ ಶೆಟ್ಟಿ ಅವರೊಂದಿಗೆ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಿದ ಶಾಸಕ ಗುರ್ಮೆ
(Kaup) ಕಾಪು: ಬಿಗ್ ಬಾಸ್ ಕನ್ನಡ ಸೀಸನ್ 12 ರ ಪ್ರಥಮ ರನ್ನರ್ ಅಪ್ ರಕ್ಷಿತಾ ಶೆಟ್ಟಿಯವರು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಮನೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದರು.
ಭೇಟಿ ನೀಡಿದ ರಕ್ಷಿತಾ ಶೆಟ್ಟಿ ಮತ್ತು ಅವರ ಮನೆಯವರನ್ನು ಕಾಪು ಶಾಸಕ ಸುರೇಶ್ ಶೆಟ್ಟಿಯವರು ಸ್ವಾಗತಿಸುವ ಮೂಲಕ ಬರಮಾಡಿ ಕೊಂಡರು.
ಶಾಸಕರ ಮನೆಗೆ ಆಗಮಿಸಿದ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಶಾಸಕ ಅವರೊಂದಿಗೆ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಿದರು.
ತುಳುನಾಡಿನ ಕುವರಿ ತನ್ನ ಮುಗ್ಧತೆ ಹಾಗೂ ತುಂಟಾಟಿಕೆಯಿಂದ ಜನ ಮನ ಗೆದ್ದು ಬಿಗ್ ಬಾಸ್ ರನ್ನರ್ ಆಫ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡ ರಕ್ಷಿತಾ ಶೆಟ್ಟಿ ಅವರನ್ನು ಶಾಸಕರು ಅಭಿನಂದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತನಗಿಷ್ಟವಾದ ಬಂಗುಡೆ ಮೀನು ಹಾಗೂ ಮಲ್ಲಿಗೆಯನ್ನು ಬಿಗ್ ಬಾಸ್ ಮನೆಯಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೆ. ಆದರೆ ತಿನ್ನಲು ಸಾಧ್ಯವಾಗಲಿಲ್ಲ. ಆದರೆ ಈಗ ಜನರ ಪ್ರೀತಿಯ ಮುಂದೆ ಈಗ ಏನೂ ಬೇಡ ಅನ್ನಿಸುತ್ತಿದೆ ಎಂದರು.
ಮೀನುಗಾರರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ಅಂತರಾಳದಿಂದ ಬಂದ ಮಾತು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ರಕ್ಷಿತಾ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾ, ಕಾಪು ವಿಧಾನಸಭಾ ಕ್ಷೇತ್ರದ ಹೆಮ್ಮೆಯ ಕುವರಿ ತನ್ನ ಮುಗ್ಧತೆ ಹಾಗೂ ಪರಿಶ್ರಮದಿಂದ ಯೂಟ್ಯೂಬ್ ಮೂಲಕ ಬ್ಲಾಗ್ ಮಾಡುವ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಈಗ ಬಿಗ್ ಬಾಸ್- 12 ವೇದಿಕೆಯನ್ನು ಏರಿ ಬಿಗ್ ಬಾಸ್ ರನ್ನರ್ ಆಫ್ ಪಟ್ಟವನ್ನು ಪಡೆದು ತುಳುನಾಡಿನ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸಿದ್ದಾಳೆ. ಈಗ ತನ್ನ ಮನೆಗೆ ಆಧಾರ ಸ್ತಂಭವಾಗಿದ್ದಾಳೆ. ಅವಳ ಉಜ್ವಲ ಭವಿಷ್ಯ ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಪು ಮಂಡಲದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಗೀತಾಂಜಲಿ ಸುವರ್ಣ,ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್ ಹಾಗೂ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಸದಸ್ಯರುಗಳು, ರಕ್ಷಿತಾ ಅಭಿಮಾನಿಗಳು ಉಪಸ್ಥಿತರಿದ್ದರು.

