ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿಯ ಕೆಲ ನಾಯಕರು ಹೊಂದಾಣಿಕೆ ಮಾಡಿಕೊಂಡಿರಬೇಕು ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನವರು ಬಿಜೆಪಿ ಸರಕಾರದ ಮೇಲಿನ 40 ಪರ್ಸೆಂಟ್ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ. ಕೆಂಪಣ್ಣ ಅವರ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಊರಿಗೆಲ್ಲ ಯಾಕೆ ತಮಟೆ ಹೊಡೆದರು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿರುದ್ದ ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿದ್ದರು. ಆದರೆ ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಕೂಡ ಬಿಜೆಪಿ ಮೇಲೆ ಪಿಎಸ್ಐ ಹಗರಣ, ಬಿಟ್ ಕಾಯಿನ್ ಎಂದು ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೆ ನಿಮ್ಮ ಮತ್ತು ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲವೆಂದರೆ ನೀವು ಮಾಡುತ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದಿದ್ದಾರೆ.
ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಗೌಪ್ಯ ಒಡಂಬಡಿಕೆ ಮಾಡಿಕೊಂಡಂತೆ ವರ್ತಿಸುತ್ತಿದ್ದಾರೆ.
ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದಾಗ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ಆರೋಪಗಳ ಬಗ್ಗೆ ತನಿಖೆಯ ಬೆದರಿಕೆ ಹಾಕುತ್ತಾರೆ. ಇದನ್ನು ನೋಡಿದರೆ ಎರಡೂ ಪಕ್ಷದ ಹಿರಿಯ ನಾಯಕರು ಪರಸ್ಪರ ಹೊಂದಾಣಿಕೆ ರಾಜಕೀಯವನ್ನು ಮಾಡುತ್ತಿದ್ದಾರೆಂಬ ಅನುಮಾನಗಳು ಮೂಡುತ್ತಿವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಅಡ್ಜೆಸ್ಟ್ ಆಗಿಲ್ಲ. ಆಗುವುದೂ ಇಲ್ಲ ಎಂದು ಹೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದವರಿಗೆ ನೀವು ಶಿಕ್ಷೆ ಕೊಡಿಸಿದರೆ ನಮ್ಮ ಪಕ್ಷವನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ನಿಮ್ಮ ಪಾದ ಪೂಜೆ ಮಾಡುತ್ತೇನೆ ಎಂದು ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

