ಬೆಳಪು ; ವನಮಹೋತ್ಸವ ಆಚರಣೆ
ಹಸಿರು ಗ್ರಾಮ ನಮ್ಮ ಸಂಕಲ್ಪ: ಡಾ. ದೇವಿಪ್ರಸಾದ್ ಶೆಟ್ಟಿ
(Belapu) ಬೆಳಪು; ಬೆಳಪು ಗ್ರಾಮದ ಎಲ್ಲಾ ರಸ್ತೆಗಳ ಬದಿಯಲ್ಲಿ ಹಾಗೂ ಕೈಗಾರಿಕಾ ಪಾರ್ಕ್ನಲ್ಲಿ ಹಸಿರು ವನ ಮಾಡುವ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಚಾಲನೆ ನೀಡಿದರು.
ಬೆಳಪು ಗ್ರಾಮದಲ್ಲಿ ಕಳೆದ ೨೫ ವರ್ಷಗಳಿಂದ ನಿರಂತರ ಬೃಹತ್ ವನ ಮಹೋತ್ಸವ ಕಾರ್ಯಕ್ರಮ ಜರಗುತ್ತಿದ್ದು, “ಮನೆಗೊಂದು ಮಗು ಮಗುವಿಗೊಂದು ಗಿಡ” ಯೋಜನೆ, ರೈತರ ಜಮೀನಿನಲ್ಲಿ ವನ ರಚನೆ, ಪಂಚಾಯತ್ ಕಾಡು ಪ್ರದೇಶದಲ್ಲಿ ಲಕ್ಷ ಸಸಿ ನೆಡುವ ಕಾರ್ಯಕ್ರಮ, ಶಾಲೆಯಲ್ಲಿ “ಚಿಣ್ಣರ ವನ” ರಚನೆ, ಪ್ರತಿ ಮನೆಗೂ ಅವರ ಬೇಡಿಕೆಯಂತೆ ಉಚಿತ ಗಿಡ ನೀಡುವ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮವನ್ನು ಪರಿಸರ ಕಾಳಜಿಯೊಂದಿಗೆ ಹಸಿರು ಗ್ರಾಮವನ್ನಾಗಿಸುವ ಸಂಕಲ್ಪ ಹೊಂದಲಾಗಿದೆಂದು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಪ್ರಸಕ್ತ ವರ್ಷ ಬೆಳಪು ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅತ್ಯಾಧುನಿಕ ಸಂಶೋಧನಾ ಕೇಂದ್ರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕೈಗಾರಿಕಾ ಪಾರ್ಕ್ ಮತ್ತು ಹಿಂದೂ ರುದ್ರ ಭೂಮಿ ಹಾಗೂ ದಫನ ಭೂಮಿಯಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದೆಂದು ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾಪು ಉಪ ವಲಯ ಅರಣ್ಯಾಧಿಕಾರಿಯವರಾದ ಜೀವನ್ದಾಸ್ ಶೆಟ್ಟಿ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ, ಗಸ್ತು ಅರಣ್ಯ ಪಾಲಕರಾದ ಅಖಿಲೇಶ್, ಪಂಚಾಯತ್ ಸದಸ್ಯರಾದ ಸುಲೇಮಾನ್, ಪ್ರಮುಖರಾದ ಸುದರ್ಶನ್ ಪೂಜಾರಿ, ಗಿರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

