ಭ್ರಷ್ಟಾಚಾರವು ಸಮಾಜದ ಬಹು ದೊಡ್ಡ ಪಿಡುಗು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮ
(Bantakal) ಬಂಟಕಲ್: ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮʼವು ಭಾನುವಾರ ಬೆಳಿಗ್ಗೆ ವಿದ್ಯಾಲಯದ ಆವರಣದಲ್ಲಿ ನೆರವೇರಿತು.
ಈ ಸಮಾರಂಭದಲ್ಲಿಮುಖ್ಯ ಅತಿಥಿಗಳಾದ ಮಾನ್ಯ ಸವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಭ್ರಷ್ಟಾಚಾರವು ಸಮಾಜದ ಬಹು ದೊಡ್ಡ ಪಿಡುಗು. ನಮ್ಮ ದೇಶದಲ್ಲಿ ನಡೆದ ವಿವಿಧ ಹಗರಣಗಳಲ್ಲಿ ದೇಶಕ್ಕೆ ಉಂಟಾದ ನಷ್ಟದ ಕುರಿತು ವಿವರವಾಗಿ ಮನದಟ್ಟು ಮಾಡಿದ ಅವರು, ಪ್ರತಿಯೊಬ್ಬ ನಾಗರೀಕನೂ ತಮ್ಮ ಸಂಪಾದನೆಯಲ್ಲೇ ತೃಪ್ತಿ ಪಡುವ ಮೂಲಕ ದುರಾಸೆಯಿಂದ ಮುಕ್ತರಾಗಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಭ್ರಷ್ಟಾಚಾರ ಕುರಿತಾಗಿ ಸಮಾಜದ ಭಾವನೆಯನ್ನು ಬದಲಾಯಿಸುವಲ್ಲಿ ಯುವ ಜನತೆ ಪ್ರಮುಖ ಪಾತ್ರ ವಹಿಸಬೇಕೆಂದು ಒತ್ತಿಹೇಳಿದರು. ಯುವಜನತೆಯು ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿಯಿಂದ ಹೊರಬರಬೇಕು. ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿನ ಅನುಭವಗಳನ್ನು ಸಭಿಕರಲ್ಲಿ ಹಂಚಿಕೊಂಡ ಸಂತೋಷ್ ಹೆಗ್ಡೆ, ತಮ್ಮ ಉಪನ್ಯಾಸದ ಕೊನೆಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ರವರು ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ಶೈಕ್ಷಣಿಕ ಮತ್ತು ಪಠ್ಯೇತರ ಕ್ಷೇತ್ರಗಳಲ್ಲಿನ ಪ್ರಮುಖ ಸಾಧನೆಗಳ ಮಾಹಿತಿ ನೀಡಿರು.
ಅಕಾಡೆಮಿಕ್ ಡೀನ್ ಡಾ. ನಾಗರಾಜ ಭಟ್ರವರು ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಸಂಸ್ಥೆಯ ನಿಯಮಗಳ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ತಮ್ಮ ವೃತ್ತಿ ಜಿವನದಲ್ಲಿ ಉತ್ತಮ ಸಾಧನೆಮಾಡಲು ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೋಷಕರು ತಮ್ಮಅಭಿಪ್ರಾಯವನ್ನು ಹಂಚಿಕೊಂಡರು.
ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ, ಸಂಸ್ಥೆಯು ಕಳೆದ ೧೪ ವರ್ಷದಿಂದ ನಡೆದು ಬಂದ ಹಾದಿಯನ್ನು ಮೆಲಕು ಹಾಕಿದರು. ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರವಾಗಿ ತಿಳಿಸಿದರು. ಈ ಸಂದರ್ಭ ಅತ್ಯುನ್ನತ ಹುದ್ದೆಯಲ್ಲಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಸ್ಮರಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ಸಂಸ್ಥೆಯ ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳನ್ನು ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯ ಕ್ಯಾಸ್ಥಲಿನೊ ಪರಿಚಯಿಸಿದರು.
ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ಸಂಯೋಜಕರಾದ ಡಾ. ದೀಪಿಕಾ ಬಿ ವಿ ವಂದಿಸಿದರು. ವಿದ್ಯಾರ್ಥಿ ಅಭಿಷೇಕ್ ಕಿಣಿ ಪ್ರಾರ್ಥಿಸಿದರು.
ಸಂಸ್ಥೆಯ ಪ್ರಾಧ್ಯಾಪಕರಾದ ಶ್ರೀಮತಿ ಪ್ರೀತಿ ಮತ್ತು ಶ್ರೀ ಸಚಿನ್ ಪ್ರಭು ಇವರು ಕಾರ್ಯಕ್ರಮ ನಿರೂಪಿಸಿದರು.
