ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಶಿಬಿರಗಳು ಪ್ರಯೋಜನಕಾರಿ : ರಂಗಕರ್ಮಿ ರಾಮಾಂಜಿ ಉಡುಪಿ
ಓಂಕಾರ್ ಕಲಾ ಸಂಗಮ ಆಯೋಜಿಸಿದ “ರಜಾ ಮಜಾ” ಮಕ್ಕಳ ಬೇಸಿಗೆ ಶಿಬಿರ
(Padubidri) ಪಡುಬಿದ್ರಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಬೇಸಿಗೆ ಶಿಬಿರಗಳು ಪ್ರಯೋಜನಕಾರಿಯಾಗಿದೆ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ರಂಗಕರ್ಮಿ ರಾಮಾಂಜಿ ಉಡುಪಿ ಅವರು ಹೇಳಿದರು.
ಅವರು ಪಡುಬಿದ್ರಿಯ ಓಂಕಾರ್ ಕಲಾ ಸಂಗಮ ಆಯೋಜಿಸಿದ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ಮೊಬೈಲ್ ಮತ್ತು ಟಿವಿ ಬಳಕೆಗೆ ಹೆಚ್ಚು ಒಲವು ತೋರಿಸುತ್ತಿರುವ ಇಂದಿನ ದಿನಗಳಲ್ಲಿ, ಮಕ್ಕಳ ಪ್ರತಿಭೆ ಬೆಳೆಸಲು ಇಂತಹಾ ಶಿಬಿರಗಳು ಮಹತ್ವದ ಪಾತ್ರವಹಿಸುತ್ತಿವೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ತಂಡದಲ್ಲಿ ಕೆಲಸ ಮಾಡುವ ಗುಣ ಹಾಗೂ ನಾಯಕತ್ವ ಸಾಮರ್ಥ್ಯಗಳು ಬೆಳೆಯುತ್ತಿವೆ. ಜೊತೆಗೆ, ಡಿಜಿಟಲ್ ಸಾಧನಗಳಿಂದ ದೂರವಿದ್ದು ನೈಜ ಅನುಭವಗಳನ್ನು ಪಡೆಯಲು ಸಹಾಯವಾಗುತ್ತಿದೆ ಎಂದರು.
ಬಾಲಕಲಾವಿದೆ ಶಾರ್ವರಿ ಭಟ್ ಶಿಬಿರಕ್ಕೆ ಚಾಲನೆ ನೀಡಿ, ಮಕ್ಕಳು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ತಮ್ಮ ಅಡಗಿದ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಬಾಲಕ ಲಾವಿದೆಯಾಗಿ ಸಾಧನೆಗೈದ ಶಾರ್ವರಿ ಭಟ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಓಂಕಾರ್ ಕಲಾಸಂಗಮದ ಪಾಲುದಾರರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸುನೀಲ್ ಕುಮಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಕಳ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಜ್ಯೋತಿ ರಮೇಶ್, ಉದಯಕುಮಾರ್ ಭಟ್, ಅರುಣ್ ಕುಮಾರ್ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಹೇಮಲತಾ ವಂದಿಸಿದರು. ದೀಪಶ್ರೀ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

