ಮಜೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ ಹಲವು ಮನೆಗಳ ನೀರು ಕಲುಷಿತ, ಸ್ಥಳಿಯರಲ್ಲಿ ಆತಂಕ
(Kaup) ಕಾಪು: ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತ ಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೇ ದಿನಬಳಕೆಗೆ ಬಳಸುವುದೂ ಕಷ್ಟ ಸಾಧ್ಯವೆಂಬಂತಾಗಿದೆ. ಹಾಗಾಗಿ ಎಲ್ಲಾ ಮನೆಯವರೂ ಪಕ್ಕದಲ್ಲೇ ಇರುವ ಬಾವಿಯ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯತಿಯ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆ ಸಿಬಂದಿಗಳು ಎರಡೆರಡು ಬಾರಿ ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಈ ನಡುವೆಯ ಕೆಲ ಮನೆಯವರು ಉಡುಪಿಯ ಖಾಸಗಿ ಪ್ರಯೋಗಾಲಯದಲ್ಲಿ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದಾರೆ. ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಅಮೋನಿಯಾ ಅಂಶ ಹೆಚ್ಚಾಗಿರುವುದು ಧೃಢ ಪಟ್ಟಿದೆ. ಆದರೆ ಈ ಪರಿಸ್ಥಿತಿ ಯಾಕಾಗಿ ನಿರ್ಮಾಣವಾಗಿದೆ ಎನ್ನುವುದು ಸ್ಥಳೀಯರಿಗೆ ಇನ್ನೂ ತಿಳಿದು ಬಂದಿಲ್ಲ.
ಹತ್ತು ವರ್ಷದಿಂದ ಇಲ್ಲಿ ವಾಸವಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಮನೆಯ ಬಾವಿಯ ನೀರು ಕಲುಷಿತಗೊಂಡಿದೆ. ನೀರು ಸಂಪೂರ್ಣ ಕೆಂಪಾಗಿದ್ದು ಗಬ್ಬು ವಾಸನೆ ಬರುತ್ತಿದೆ. ಕೆಟ್ಟ ನೀರಿನ ಕಾರಣದಿಂದಾಗಿ ಮನೆಯ ಸುತ್ತಲೂ ಗಬ್ಬು ವಾಸನೆ ಹರಡಿದೆ. ಮಳೆಗಾಲ ಆರಂಭಗೊಂಡ ಬಳಿಕ ಈ ಸಮಸ್ಯೆ ತಲೆ ದೋರಿದ್ದು ಗ್ರಾ. ಪಂ. ಜತೆಗೆ ನಾವು ವೈಯಕ್ತಿಕವಾಗಿ ನಾವು ಕೂಡಾ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದೇವೆ. ನೀರು ಹಾಳಾಗಿರುವ ಬಗ್ಗೆ ವರದಿ ಬಂದಿದೆ. ಪ್ರಯೋಗಾಲಯದ ವೈದ್ಯರು ಔಷಧಿಕೊಟ್ಟಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಸ್ಥಳೀಯ ನಿವಾಸಿ ಜನಾರ್ದನ ರಾವ್ ತಿಳಿಸಿದ್ದಾರೆ.
ಅಮೋನಿಯಾ ಅಂಶ ಅಧಿಕವಾಗಿ ಪತ್ತೆಯಾಗಿದೆ : ಬಾವಿಯ ನೀರು ಕಲುಷಿತವಾಗಿರುವ ಬಗ್ಗೆ ಪರೀಕ್ಷೆಗಾಗಿ ಖಾಸಗಿಯಾಗಿ ಪ್ರಯೋಗಾಲಯಕ್ಕೆ ತಂದಿದ್ದು, ಅದನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಪರೀಕ್ಷೆಗೊಳಪಟ್ಟಿರುವ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಅಮೋನಿಯಾ ಅಂಶಗಳು ಅಧಿಕವಾಗಿ ಪತ್ತೆಯಾಗಿವೆ. ಕೊಳೆತ ವಾಸನೆ ಹೆಚ್ಚಿದ್ದು, ಬಾವಿ ನೀರು ಕೆಸರಿನ ರಾಡಿಯಂತಾಗಿರುವುದು ಪತ್ತೆಯಾಗಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಒಂದೆರಡು ದಿನದ ಬಳಿಕ ಶುಚಿಯಾಗಬೇಕಿದ್ದು, ಇಲ್ಲಿ ಬಾವಿಯ ನೀರು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದನ್ನು ಪತ್ತೆ ಹಚ್ಚ ಬೇಕಿದೆ. ನೀರನ್ನು ಅತ್ಯಾಧುನಿಕ ತಂತ್ರಜ್ಣಾನದಲ್ಲಿ ಪರಿಕ್ಷಿಸುವ ಅಗತ್ಯತೆ ಕಂಡು ಬರುತ್ತಿದೆ ಎನ್ನುತ್ತಾರೆ ಉಡುಪಿ ಖಾಸಗಿ ಪ್ರಯೋಗಾಲಯದ ತಜ್ಞೆ ಡಾ| ಅವಿಲಾ ಡಿ ಸೋಜ.
ನೀರು ಕಲುಷಿತಗೊಂಡಿರುವುದು ಧೃಡಪಟ್ಟಿದೆ :
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ೬ ಮನೆಗಳಿಂದ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಎರಡು ಬಾವಿಗಳ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ವರದಿ ಸಿಕ್ಕಿದೆ. ಮತ್ತೆರಡು ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಮಾಹಿತಿ ಲಭಿಸಿರುವುದರಿಂದ ಅಲ್ಲಿಯ ನೀರನ್ನೂ ಪರೀಕ್ಷೆಗಾಗಿ ರವಾನಿಸಲಾಗಿದೆ. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎನ್ನುತ್ತಾರೆ ಮಜೂರು ಗ್ರಾ. ಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು.

