ಮದುವೆ ಸಭಾಂಗಣದ ಆವರಣದಲ್ಲಿ ರಕ್ತದ ಮಡವಿನಲ್ಲಿ ಮೆಡಿಕಲ್ ರೆಪ್ನ ಮೃತದೇಹ ಪತ್ತೆ
(Bantwala)ಬಂಟ್ವಾಳ:ರಾ.ಹೆ.ಯ ಬ್ರಹ್ಮರಕೂಟ್ಟುವಿನಲ್ಲಿರುವ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ಮೆಡಿಕಲ್ ರೆಪ್ ವೋರ್ವರ ಮೃತದೇಹ ಪತ್ತೆಯಾಗಿದೆ.
ಸಭಾಂಗಣದ ಕಂಪೌಂಡ್ ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ.
ಮೃತ ಯುವಕನನ್ನು ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ( 32) ಎಂದು ಗುರುತಿಸಲಾಗಿದೆ.
ಬಂಟರ ಭವನದ ಹೊರಗಡೆಯಲ್ಲಿ ಈತನಿಗೆ ಸೇರಿದ ಬೈಕ್ ಕಂಡು ಬಂದಿದೆ. ವೃತ್ತಿಯಲ್ಲಿ ಮೆಡಿಕಲ್ ರೆಪ್ರೆಸೆಂಟ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಶವದ ಕುತ್ತಿಗೆಯಲ್ಲಿ ಬ್ಯಾಗ್ ಕೂಡ ಕಂಡುಬಂದಿದೆ.
ಮಧ್ಯರಾತ್ರಿ ಸುಮಾರು 12 .45 ರ ಹೊತ್ತಿಗೆ ಮೂತ್ರ ವಿಸರ್ಜನೆಗೆಂದು ಸಭಾಂಗಣ ಬಳಿ ಬಂದು ತನ್ನ ಬೈಕನ್ನು ನಿಲ್ಲಿಸಿ ಬಳಿಕ ರಿಲಾಕ್ಸ್ ಗಾಗಿ ಕಂಪೌಂಡ್ ಮೇಲೆ ಕುಳಿತಿದ್ದು, ಅಚಾನಕ್ ಆಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಪರಿಣಾಮ ತಲೆಭಾಗಕ್ಕೆ ತೀವ್ರ ತರದ ಗಾಯಗೊಂಡು ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾನೆಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಈತ ಸಭಾಂಗಣದತ್ತ ಬರುವ, ಕಂಪೌಂಡ್ ಮೇಲೆ ಕುಳಿತಿರುವ, ಆಯ ತಪ್ಪಿ ಕಳೆಗೆ ಬಿದ್ದಿರುವ ದೃಶ್ಯ ಎಲ್ಲವೂ ಸಭಾ ಭವನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸೈ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

