ಮನಸ್ಸಿನ ಏಕಾಗ್ರತೆಗೆ ಭಗವಂತನ ಧ್ಯಾನ ಬಹಳ ಮುಖ್ಯ : ಈಶಪ್ರಿಯತೀರ್ಥ ಸ್ವಾಮೀಜಿ
ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಶಾಲೆ, ಗಣಪತಿ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಆಶೀರ್ವಚನ
(Padubidri) ಪಡುಬಿದ್ರಿ: “ಮನಸ್ಸು ಏಕಾಗ್ರತೆಯಿಂದ ಕೂಡಿದ್ದರೆ ಮಾತ್ರ ಅಧ್ಯಯನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಮನಸ್ಸಿನ ಏಕಾಗ್ರತೆಗೆ ಭಗವಂತನ ಧ್ಯಾನ ಬಹಳ ಮುಖ್ಯವಾದುದು. ಭಗವಂತನ ಸ್ಮರಣೆಯಿಂದಲೇ ಎಲ್ಲರ ಜೀವನ ಸಂತೋಷ ಮಯವಾಗಿರುತ್ತದೆ” ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಈಶಪ್ರಿಯತೀರ್ಥಶ್ರೀಪಾದರು ಹೇಳಿದರು.
ಅವರು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ನೃತ್ಯ ನಿರ್ದೇಶಕಿ, ಕಲಾವಿದೆ ಡಾ. ಭ್ರಾಮರಿ ಶಿವಪ್ರಕಾಶ್ ಇವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ, ವಿದ್ಯಾರ್ಥಿಗಳ ಜೀವನದಲ್ಲಿ ಕಲೆ, ಸಾಹಿತ್ಯದ ಅನಿವಾರ್ಯತೆಯ ಕುರಿತು ಉಪನ್ಯಾಸ ನೀಡಿದರು.
ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿಯವರು ಶಾಲಾ ಧ್ವಜವನ್ನು ಅರಳಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ರಾಜೇಶ ದೇವಾಡಿಗರವರು ಸ್ವಸ್ತಿ ವಾಚನ ಮಾಡಿದರು.
ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರು ವಿಶೇಷ ನಗದು ಬಹುಮಾನಗಳನ್ನು ನೀಡಿ ಪುರಸ್ಕರಿಸಿದರು. ದತ್ತಿನಿಧಿಯ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ವಿತರಿಸಿದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವಿದ್ಯಾರ್ಥಿಗಳಿಂದ ವಿಶೇಷ ಮನೋರಂಜನೆ ಕಾರ್ಯಕ್ರಮವು ನಡೆಯಿತು.

