ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ಉಪನ್ಯಾಸ-ನೃತ್ಯ ಪ್ರದರ್ಶನ
(Manipala) ಮಣಿಪಾಲ: ನೃತ್ಯ ಕಲೆಯು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಮನಃಶಾಂತಿಗೆ ಕಾರಣವಾಗಲು ಸಾಧ್ಯ ಎಂದು ಖ್ಯಾತ ಮನೋವೈದ್ಯೆ-ನೃತ್ಯ ಕಲಾವಿದೆ, ಲೇಖಕಿ ಡಾ. ಕೆ.ಎಸ್. ಪವಿತ್ರಾ (Dr. SK Pavitra) ಹೇಳಿದರು.
ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ “ನೃತ್ಯ ಮತ್ತು ಶಾಂತಿ – ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ” ಎಂಬ ವಿಷಯದ ಕುರಿತು ಉಪನ್ಯಾಸ-ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.
“ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇವಲ ನೃತ್ಯ ಪ್ರಕಾರದ ಸರಳವಾದ ಮತ್ತು ಯಾಂತ್ರಿಕ ಅನ್ವಯಿಕೆಯನ್ನು ಮಾಡಬಾರದು” ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಅವರು ನೃತ್ಯವು ಶಾಂತಿಯ ಮಾಧ್ಯಮವಾಗಬಹುದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು, ಸ್ವಾತಂತ್ರ್ಯದ ಅನುಭೂತಿಯನ್ನು ಉಂಟುಮಾಡಬಹುದು ಎಂದು ತಿಳಿಸಿದರು.
ತಾತ್ವಿಕ ಸಾಹಿತ್ಯದ ಚೌಕಟ್ಟನ್ನು ತೆಗೆದುಕೊಂಡು, ಅನ್ನಮಯ, ಆನಂದಮಯ, ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಕೋಶಗಳ ನಡುವೆ ನೃತ್ಯ ಹೇಗೆ ಆನಂದಕ್ಕೆ ಕಾರಣವಾಗಬಲ್ಲವು ಎಂಬುದನ್ನು ವಿವರಿಸಿದರು.
ದ.ರಾ. ಬೇಂದ್ರೆ, ವೈದೇಹಿ, ಕನಕದಾಸರು, ಆದಿಕವಿ ಪಂಪ ಅವರ ಆಯ್ದ ಕಾವ್ಯಕ್ಕೆ ನೃತ್ಯ ಮಾಡುವ ಮೂಲಕ ಆ ಕವಿತೆಗಳಲ್ಲಿ ವ್ಯಕ್ತವಾಗುವ ಭಾವವನ್ನು ನೃತ್ಯವು ಹೇಗೆ ಹೊರತರುತ್ತದೆ ಎಂಬುದನ್ನು ಪ್ರದರ್ಶಿಸಿದರು.
ಬೇಂದ್ರೆಯವರ ‘ಗಂಗಾವತರಣ’, ವೈದೇಹಿಯವರ ‘ಶಿವನ ಮೀಯಿಸುವ ಹಾಡು’ ಮತ್ತಿತರ ಕಾವ್ಯ-ನರ್ತನ ಗಮನ ಸೆಳೆದವು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ (GCPAS Head Prof. Varadesh Hiregange) ಅವರು ಎಕೋಸೊಫಿ, ಎಸ್ತೆಟಿಕ್ಸ್, ಪೀಸ್(ಶಾಂತಿ), ಆರ್ಟ್ ಮೀಡಿಯಾ(ಕಲಾಮಾಧ್ಯಮ)- ಗಾಂಧಿಯನ್ ಸೆಂಟರ್ ನ ಮುಖ್ಯ ಅಧ್ಯಯನ ವಿಷಯಗಳಾಗಿವೆ ಎಂದರು.
ಡಾ. ಭ್ರಮರಿ ಶಿವಪ್ರಕಾಶ್ ಹಾಗೂ ಕು. ಅಪೂರ್ವ ಕಾರ್ಯಕ್ರಮ ಸಂಯೋಜಿಸಿದರು.

