ಮೂಡಬಿದ್ರಿ ಆಳ್ವಾಸ್ ವಿರಾಸತ್ : ಕಿಕ್ಕಿರಿದು ತುಂಬಿದ ಸಭಾಂಗಣ: ಜೀವನದಲ್ಲೇ ನೀಡಿದ ಶ್ರೇಷ್ಠ ಕಾರ್ಯಕ್ರಮ – ಗಾಯಕಿ ಶ್ರೇಯಾ ಘೋಷಾಲ್ ಬಣ್ಣನೆ

ಆಳ್ವಾಸ್ ಅಭಿಮಾನ ಸಾಗರಕ್ಕೆ ‘ಶ್ರೇಯಾ’ ಫಿದಾ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಾಯನ ರಸಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ಮೂರನೇ ದಿನ ಆಯೋಜಿಸಲಾಗಿತ್ತು.
ಪ್ರೇಕ್ಷಕರು ತುಂಬಿ ತುಳುಕಿದ್ದು, ಹಾಡಿನ ಹೊನಲಿಗಾಗಿ ಕಾದು ನಿಂತಿದ್ದರು.
ಪಶ್ಚಿಮ ಬಂಗಾಳದ ಬೆಹರಾಂಪುರದ ಹುಡುಗಿ ಶ್ರೇಯಾ ಘೋಷಾಲ್ ‘ ನಮಸ್ಕಾರ ಮೂಡುಬಿದಿರಿ…’ ಎನ್ನುತ್ತಲೇ… `ಯಾರಾ ಮುಜುಕೋ ಇರಾದೆ ದೇ… ಸುನ್ ರಹಾ ಹೇ ನಾ ತೂ.’. ಹಾಡುತ್ತಲೇ ವೇದಿಕೆ ಪ್ರವೇಶಿಸುತ್ತಿದ್ದಂತೆಯೇ ಸಡಗರದ ಅಲೆ ಉಕ್ಕಿ ಬಂದ ಸಾಗರದಂತೆ ಸಭಾಂಗಣವೇ ರಂಗೇರಿತು. ಎಲ್ಲ ದಿಕ್ಕಿನಲ್ಲೂ `ಸುನ್ ರಹಾ ಹೇ ನೇ ತೂ’ ಎಂಬ ಪ್ರತಿಧ್ವನಿ.
`ಓ ಮೈ ಗಾಡ್ ಐ ಕಾನ್ ನಾಟ್ ಬಿಲಿವ್ ಇಟ್’. ಆಳ್ವಾಸ್ ವಿರಾಸತ್ ನನ್ನ ಜೀವನದ ಶ್ರೇಷ್ಠ ಸಂಗೀತ ಕಾರ್ಯಕ್ರಮ ದಲ್ಲಿ ಒಂದು. ವಿರಾಸತ್ ಕೇಳಿದ್ದೆ. ಆದರೆ, ನಾನು ಅದರ ಭಾಗವಾಗಿರುವುದು ಹೆಮ್ಮೆ ಎಂದು ಶ್ರೇಯಾ ಧನ್ಯತೆಯ ಭಾವ ವ್ಯಕ್ತ ಪಡಿಸಿದರು.
ಕನ್ನಡದ `ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ನಿನ್ನ ಹಾಗೆ ಬೇರೆ ಇಲ್ಲವೇ..’ ಹಾಡಿದರು.
`ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ… ಹಾಡು ಹಾಡಿದರು.
ಪ್ರೇಕ್ಷಕರು ತಮ್ಮ ಮೊಬೈಲ್ ಲೈಟ್ ಆನ್ ಮಾಡಿ ಮೇಲೆ ಬೀಸಿದಾಗ ಸಭಾಂಗಣದಲ್ಲಿ ನಕ್ಷತ್ರ ಲೋಕವೇ ಸೃಷ್ಟಿಯಾಯಿತು. `ತಾರೇ ಜಮೀನ್ ಪೇ ಹೇ’ ಎಂದ ಶ್ರೇಯಾ ಅವರು `ತೇರಿ ಓರ್…’ ಡುಯೆಟ್ ಹಾಡಿದರು.
ಸರಿಗಮಪ ರಿಯಾಲಿಟಿ ಶೋ ವಿಜೇತೆ.. `ಅಗರ್ ತೂ ಮಿಲ್ ಜಾವೋ’ ಎಂದಾಗ ಹುಡುಗರೆಲ್ಲ ಫಿದಾ.
`ಕೊನೆಯಿಲ್ಲದ ಸಭಾಂಗಣ ಇದೇ ಪರಿಶುದ್ಧ ಪ್ರೀತಿ. ಸಂಸ್ಥೆ ಅಂದರೆ ಹೀಗಿರಬೇಕು. ನನಗೆ ಆಳ್ವಾಸ್ ಬಂದಾಗ ಮನೆಗೆ ಬಂದ ಅನುಭವ ಆಗುತ್ತಿದೆ. ಈ ನೆಲಕ್ಕೂ ನನಗೂ ಏನೋ ಸಂಬಂಧ ಇದೆ’ ಎಂದು, `ಕಿಸಿ ಕೇಲಿಯೇ ಕಿಸಿ ಕೋ ಬನಾಯಾ’ ಎಂದು ಬಾಂಧವ್ಯಗಳ ವರ್ಣಿಸುವ ಸಾಹಿತ್ಯ ಹಾಡಿದರು.
`ತನ್ನ ಅನನ್ಯ ಅನುಭವದ ಗೀತೆ, ನಾನು ತಪ್ಪಿದರೆ ನೀವೆ ಸರಿ ಪಡಿಸಿ’ ಎಂದು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ `ನಿನ್ನ ನೋಡಿ ಸುಮ್ಮನೆ ಹೆಂಗೆ ಇರಲಿ’ ಹಾಡಿದರು.
ಐಶ್ವರ್ಯ ರೈ ಅಭಿನಯದ ʼಗುರು’ ಸಿನಿಮಾದ ಎ. ಆರ್. ರೆಹಮಾನ್ ರಾಗ ಸಂಯೋಜನೆಯ `ನನ್ನಾರೆ ನನ್ನಾರೆ…. ಬರ್ ಸೋರೇ ಮೇಘಾ ಮೇಘಾ’ ಹಾಡಿದಾಗ ಅಕ್ಷರಶಃ ಮಳೆ ಸಿಂಚನದಂತೆ ಪ್ರೇಕ್ಷಕರ ಚಪ್ಪಾಳೆ. ನಂತರದ ಹಾಡೇ.. `ಡೋಲು ಬಾಜೇ’
ಇಂತಹ ಆಳ್ವಾಸ್ ಕುಟುಂಬ ಕಟ್ಟಿದ ಡಾ.ಮೋಹನ ಆಳ್ವ ಅವರಿಗೆ ಅಭಿನಂದನೆ ಎಂದು ಶ್ರೇಯಾ ಘೋಷಾಲ್ ಕೈ ಮುಗಿದರು.
ಬಳಿಕ ಬಂದ ಕಿಂಜಲ್ ಚಟರ್ಜಿ `ದಿಲ್ ಚಾಹ್ತಾ ಹೇ’ ಮೂಲಕ ರಂಜಿಸಿದರು. ಗಾಯಕ ಕೆಕೆ ಅವರ ಜನಪ್ರಿಯ ಹಾಡನ್ನು ಹಾಡಿದರು. ಹಾಡಿನಷ್ಟೇ ಕುಣಿದರು, ಕುಣಿಸಿದರು. ಅವರ ಕುಣಿತಕ್ಕೆ ಜೊತೆ ನೀಡಿದ್ದು ಪ್ರಭುದೇವ್ ಹೆಜ್ಜೆ ಹಾಕಿದ’ `ಕಾದಲನ್” ಸಿನಿಮಾದ.. `ಊರ್ವಶಿ, ಊರ್ವಶಿ… ಟೇಕ್ ಇಟ್ ಈಸಿ ಊರ್ವಶಿ…’. ಸಾಲುಗಳು. ನಡು ನಡುವೆ ಸಹ ಕಲಾವಿದರೊಂದಿಗೆ ಜುಗಲ್ ಬಂಧಿ ಮಾಡಿದರು. ಬಳಿಕ ಮೊಳಗಿದ್ದು, `ಏಕ್ ಹೋಗಯೇ ಹಮ್ ಔರ್ ತುಮ್’… ಹಮ್ಮಾ ಹಮ್ಮಾ…’.
`ಎಂಚ ಉಲ್ಲರೂ ಪೂರಾ, ಎಲ್ಲರೂ ಹೇಗಿದ್ದೀರಿ’ ಎಂದು ತುಳು- ಕನ್ನಡದಲ್ಲಿ ಪ್ರಶ್ನಿಸುತ್ತಲೇ ಸಣ್ಷ ವಿರಾಮದ ಬಳಿಕ ವೇದಿಕೆಗೆ ಬಂದ ಶ್ರೇಯಾ ಘೋಷಾಲ್, ೩ ಈಡಿಯೆಟ್ಸ್ ಸಿನಿಮಾದ ʼಸುಬಿ ಡುಬಿ ಸುಬಿ ಡುಬಿ ಪಂಪಾರಾ…’ ಹಾಡಿದರು.
ಅನುಷ್ಕಾ ಮತ್ತು ಶಾರುಕ್ ನಟನೆಯ ʼರಬ್ ನೇ ಬನಾದಿ ಜೋಡಿ’ ಸಿನಿಮಾದ `ತುಜ್ ಮೇ ರಬ್ ದಿಕ್ ತಾ ಹೇ … ಯಾರಾ ಮೈ ಕ್ಯಾಕರೂ…’ ಹಾಡಿದಾಗ ಪ್ರೇಮಲೋಕವೇ ಸೃಷ್ಟಿಯಾದಂತೆ ಪ್ರೇಕ್ಷಕರು ಭಾವ ಲಹರಿಗೆ ಜಾರಿದರು.
ಬಳಿಕ ವಿರಹ ವೇದನೆಯ 2006 ರಲ್ಲಿ ತೆರೆಕಂಡ ಮುಂಗಾರು ಮಳೆಯ ʼಅರಳುತಿರು ಜೀವದ ಗೆಳೆಯ..’ ಹಾಡಿದರು. ʼಕನ್ನಡ ಹಾಡುಗಳೇ ಸುಮಧುರ’ ಎಂದು ಭಾವುಕರಾದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರವರು (Alvas Education Trust President DR M Mohna Alva) ಶ್ರೇಯಾರವರನ್ನು ಅಭಿನಂದಿಸಿ, ಸನ್ಮಾನಿಸಿದರು.

