ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಪ್ರೀಮಿಯರ್ ಲೀಗ್
(Palimaru) ಪಲಿಮಾರು: ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಪಲಿಮಾರು ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಕೂಟದಲ್ಲಿ ಅಸ್ತಪಡ್ಪು ವಾಲ್ವ್ಸ್ ತಂಡ ಶ್ರೀ ಆದಿ ಬ್ರಹ್ಮಲಿಂಗೇಶ್ವರ ಟ್ರೋಫಿ-೨೦೨೪ ಸಹಿತ ೪೦,೦೦೧ ನಗದು ಗೆದ್ದುಕೊಂಡಿತು.
ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವೈದ್ಯಕೀಯ ನೆರವಿಗಾಗಿ ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹಾಗೂ ಉಪಾಧ್ಯಕ್ಷ ರಾಯೇಶ್ ಪೈ ಮುಂದಾಳತ್ವದಲ್ಲಿ ನಡೆದ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಅಸ್ತಪಡ್ಪು ವಾಲ್ವ್ಸ್ ತಂಡ ಅಡ್ಡೆದ ಜವನೆರ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿತು.
ರನ್ನರ್‌ಅಪ್ ಅಡ್ಡೆದ ಜವನೆರ್ ತಂಡ ೩೦,೦೦೧ ನಗದು ಸಹಿತ ಟ್ರೋಫಿ ಪಡೆಯಿತು.
ಐಪಿಎಲ್ ಮಾದರಿಯಲ್ಲಿ ೮ ಜನ ಮಾಲೀಕತ್ವದ ಶ್ರೀ ಧರ್ಮಜಾರಂದಾಯ ಮೂಡುಪಲಿಮಾರು, ಅಸ್ತಪಡ್ಪು ವಾಲ್ವ್ಸ್ ಅಡ್ಡೆದ ಜವನೆರ್, ಅಡ್ವೆ ಬುಲ್ಸ್, ನಂದಿಕೂರು ಸ್ಟೈಕರ್ಸ್ ವೀರ ವಿನಾಯಕ ಪಲಿಮಾರು, ರಾಯಲ್ ಸ್ಟಾರ್ಸ್ ಪಲಿಮಾರು, ಹೊಯಿಗೆ ಫ್ರೆಂಡ್ಸ್ ಹೊಯಿಗೆ ಸೇರಿ ೮ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಪೈನಲ್‌ನಲ್ಲಿ ಅಸ್ತಪಡ್ಪು ವಾಲ್ವ್ಸ್ ತಂಡ ಅಡ್ಡೆದ ಜವನೆರ್ ತಂಡವನ್ನು ೫ ವಿಕೆಟ್‌ಗಳಿಂದ ಸೋಲಿಸಿ ಪೈನಲ್ ಪ್ರವೇಶಿಸಿತ್ತು.
ನಿಗದಿತ ೮ ಓವರ್‌ನಲ್ಲಿ ಅಡ್ಡೆದ ಜವನೆರ್ ೪ ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿತ್ತು. ಗುರಿ ಬೆಂಬತ್ತಿದ ಅಸ್ತಪಡ್ಪು ೩ ಎಸೆತ ಬಾಕಿಯಿರುವಾಗಲೇ ೫ ವಿಕೆಟ್ ಕಳೆದುಕೊಂಡು ಜಯಶಾಲಿಯಾಯಿತು.
ಪೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಅಸ್ತಪಡ್ಪು ವಾಲ್ವ್ಸ್‌ನ ರಾಹುಲ್, ಸರಣಿ ಶ್ರೇಷ್ಠ ಅಸ್ತಪಡ್ಪುವಿನ ಜಿತೇಶ್ ಆಚಾರ್ಯ, ಉತ್ತಮ ಎಸೆತಗಾರ ಅಡ್ಡೆದ ಜವನೆರ್ ತಂಡದ ಪ್ರೀತಂ ಮತ್ತು ಉತ್ತಮ ದಾಂಡಿಗ ಪ್ರತಾಪ್, ಅಸ್ತಪಡ್ಪುವಿನ ರೋಹಿತ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ೨೫ಮಂದಿ ಹಿರಿಯ ಕ್ರಿಕೆಟ್ ಆಟಗಾರರನ್ನು ಗೌರವಿಸಲಾಯಿತು.
ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ ಪೈ, ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಉಡುಪಿ ಜಿಲ್ಲಾಧ್ಯಕ್ಷ ಶರತ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ಇಕ್ಬಾಲ್ ಕಾಂಜರಕಟ್ಟೆ, ಗ್ರಾಪಂ ಸದಸ್ಯರಾದ ಗಾಯತ್ರಿ ಡಿ ಪ್ರಭು, ಪ್ರವೀಣ್ ಕುಮಾರ್ ಅಡ್ವೆ, ಮಹೇಶ್ ಶೆಟ್ಟಿ, ಪಲಿಮಾರು ಪ್ರೀಮಿಯರ್ ಲೀಗ್ ಅಧ್ಯಕ್ಷ ಹರೀಶ್ ಶೆಟ್ಟಿ ನಂದಿಮನೆ, ಸಂಚಾಲಕ ಪ್ರಸಾದ್ ಪಲಿಮಾರು, ಕೋಶಾಧಿಕಾರಿ ತಾರನಾಥ್ ಕೋಟ್ಯಾನ್, ಸಹ ಸಂಚಾಲಕ ದಿನೇಶ್ ಪಲಿಮಾರು, ಸಂಯೋಜಕ ರೋಹಿತ್ ಪೂಜಾರಿ, ಜೊತೆ ಕಾರ್ಯದರ್ಶಿ ಮಹೇಶ್ ಪೂಜಾರಿ ಪಲಿಮಾರು, ಪ್ರವೀಣ್ ರೈ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆ: ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಶ್ರೀನಿವಾಸ ಉಡುಪ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಜಾನ್ ಪಿಂಟೋ ಪಂದ್ಯಾಟ ಉದ್ಘಾಟಿಸಿದರು.
ಮಾಜಿ ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ಮಾಜಿ ಆಟಗಾರ ಅನಂತ್ರಾಜ ಶೆಣೈ ಮತ್ತಿತರರು ಹಾಜರಿದ್ದರು.
ಪಲಿಮಾರು ಪ್ರೀಮಿಯರ್ ಲೀಗ್ ಸೀಸನ್-೨ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆದಿದ್ದು, ಪಂದ್ಯಾಟ ಉಳಿಕೆ ಮೊತ್ತದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವೈದ್ಯಕೀಯ ನೆರವನ್ನು ನೀಡಲಾಗುವುದು. ಮುಂದೆಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಪಂದ್ಯಕೂಟದ ವ್ಯವಸ್ಥಾಪಕ ರಾಯೇಶ್ ಪೈ ತಿಳಿಸಿದರು.

