ಮೂಲ್ಕಿ: ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಆಶ್ರಯದಲ್ಲಿ ಶಿಕ್ಷಕರಿಗೆ ಸ್ಕೌಟ್ ಎಂಡ್ ಗೈಡ್ಸ್ ಕಾರ್ಯಕ್ರಮ
ಮೂಲ್ಕಿ,ಜು.೨೭: ಶಿಕ್ಷಣ ವ್ಯವಸ್ಥೆಯ ಜೊತೆಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆದು ತೂಗಿ ಅವರೊಳಗೆ ಸ್ತುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ತರುವಲ್ಲಿ ಸ್ಕೌಟ್ ಅಂದೋಲನ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ರೀತಿಯ ತರಬೇತಿಗಳ ಮೂಲಕ ಶಿಕ್ಷಣ ಇಲಾಖೆಯ ಜೊತೆಗೆ ಸರಕಾರದಿಂದ ಮಾನ್ಯತೆ ಪಡೆದು ಬೆಳೆದಿರುವ ಮಹಾನ್ ಸಂಘಟನೆಯಾಗಿದೆ ಎಂದು ದ.ಕ.ಜಿಲ್ಲಾ ಸ್ಕೌಟ್ ಎಂಡ್ ಗೈಡ್ಸ್ ಜಿಲ್ಲಾ ಸ್ಕೌಟ್ ಆಯುಕ್ತ ಬಿ.ಎಂ. ತುಂಬೆ ಅವರು ಹೇಳಿದರು.
ಅವರು ಮೂಲ್ಕಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮೂಲ್ಕಿ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ನಡೆದ ಇಲಾಖೆಯ ಶಿಕ್ಷಕರಿಗೆ ಸ್ಕೌಟ್ ಎಂಡ್ ಗೈಡ್ಸ್ ಕಾರ್ಯಕ್ರಮಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ತಾಲೂಕು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ ಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ. ಮಾತನಾಡಿ, ಸ್ಕೌಟ್ ವ್ಯವಸ್ಥೆಯೊಳಗೆ ಯಾರೂ ಕೂಡಾ ಅಧಿಕಾರಿಗಳಾಗಿ ಕೆಲಸ ಮಾಡುತ್ತಿಲ್ಲ. ಎಲ್ಲರೂ ಸ್ವಯಂ ಸೇವಕರ ಮಾದರಿಯಲ್ಲಿ ತಮ್ಮ ಸೇವೆಯನ್ನು ಫಲಾಪೇಕ್ಷೆ ಇಲ್ಲದೆ ಮಾಡುವ ಮೂಲಕ ಆತ್ಮ ತೃಪ್ತಿ ಹೊಂದುವ ಒಂದು ಸೇವಾ ಯೋಜನೆಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸ್ಕೌಟ್ ಎಂಡ್ ಗೈಡ್ಸ್ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್ ವಹಿಸಿ ಮಾತನಾಡಿ, ಮೂಲ್ಕಿ ಸ್ಥಳೀಯ ಸಂಸ್ಥೆ ಸ್ಕೌಟ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ವ್ಯಾಪ್ತಿಯ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಶ್ರಮ ಹಾಗೂ ಊರಿನ ಗಣ್ಯರ ಸಹಕಾರದಿಂದ ಸಾಧ್ಯವಾಗುತ್ತಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಸ್ಕೌಟ್ ರಾಜ್ಯ ಸಹ ಸಂಘಟನಾ ಆಯುಕ್ತರಾದ ಭರತ್ ಕೆ. ಹಾಗೂ ಉಪಾಧ್ಯಕ್ಷರಾದ ಸರೋಜಿನಿ ಸುವರ್ಣ, ದೇವಪ್ರಸಾದ್ ಪುನರೂರು ಹಾಗು ಹರ್ಷರಾಜ್ ಶೆಟ್ಟಿ ಜಿ.ಎಂ, ಗೈಡ್ ಕಾಪ್ಟನ್ ಕಾಮೇಶ್ವರಿ ಭಟ್ ಮುಂತಾದವರು ಸಭೆಯಲ್ಲಿ ಮಾತನಾಡಿದರು.
ರೋವರ್ ಲೀಡರ್ ರಮೇಶ್ ಸ್ವಾಗತಿಸಿದರು. ಕೋಶಾಧಿಕಾರಿ ಗೀತಾ ಶೆಟ್ಟಿ ವರದಿ ಮಂಡಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಎಂ. ಕಾರ್ಯಕ್ರಮ ನಿರೂಪಿಸಿದರು.

