ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಸಾಧ್ಯವಿಲ್ಲ, ಈಶ್ವರಪ್ಪಗೂ ಸಾಧ್ಯವಿಲ್ಲ: ಉಡುಪಿಯಲ್ಲಿ ಆರಗ ಜ್ಞಾನೇಂದ್ರ
(Udupi) ಉಡುಪಿ: ಈಶ್ವರಪ್ಪ (EX Minister Eshwarappa) ಬಂಡಾಯ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ (Ex Minister Araga Gyanendra), ಈಶ್ವರಪ್ಪನವರಿಗೆ ನಾಮಪತ್ರ ವಾಪಸ್ಸು ಪಡೆಯಲು ಸ್ವಲ್ಪ ದಿನ ಅವಕಾಶ ಇದೆ. ಅವರ ಪರಿಸ್ಥಿತಿ ಏನು ಅನ್ನೋದನ್ನು ತಿರುಗಾಟ ಮಾಡಿ ಗಮನಿಸಿರುತ್ತಾರೆ. ಈಶ್ವರಪ್ಪನವರು ಹಿಂದೆ ಸರಿದರೆ ತುಂಬಾ ಒಳ್ಳೆಯದಾಗುತ್ತೆ, ಇಲ್ಲವಾದರೆ ಅವರ ನೆಲೆ ಏನು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಘವೇಂದ್ರ (BJP MP Candidate Raghavendra) ಆ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಸಾಧ್ಯವಿಲ್ಲ, ಈಶ್ವರಪ್ಪನಿಗೂ ಸಾಧ್ಯವಿಲ್ಲ. ಈಶ್ವರಪ್ಪ ಮತ್ತು ನಾನು ಅತ್ಯಂತ ವಿಶ್ವಾಸಿಗಳು. ಹೀಗಾಗಿ ನಾಮಪತ್ರ ವಾಪಾಸು ಪಡೆಯಲು ಅವರಿಗೆ ಸಲಹೆ ಕೊಡುತ್ತೇನೆ ಎಂದು ಹೇಳಿದರು.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಶಂಕಿತ ಉಗ್ರರನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಕೇಳಿ ಸಮಾಧಾನವಾಯಿತು.
ನಾವು ನೆಮ್ಮದಿಯಿಂದ ಬದುಕಿದ್ದೇವೆ ಅಂದರೆ ಅದಕ್ಕೆ ಎನ್ ಐ ಎ ಮತ್ತು ಪೊಲೀಸರೇ ಕಾರಣ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ರೀತಿ ಕೃತ್ಯ ಮಾಡಿ ಬಚಾವಾಗಬಹುದು ಅನ್ನೋದನ್ನು ಅಧಿಕಾರಿಗಳು ಸುಳ್ಳು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮತ್ತು ಮಂತ್ರಿಗಳ ಹೇಳಿಕೆಗಳನ್ನು ನೋಡಿ ಆಶ್ಚರ್ಯವಾಗುತ್ತಿದೆ.
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಡಿಕೆ ಶಿವಕುಮಾರ್ ಗೆ ಉಗ್ರ ಎಂದು ಕರೆಯಲು ತಕರಾರು ಇತ್ತು. ಆತ ನಮ್ಮ ಬ್ರದರ್ ಇದ್ದ ಹಾಗೆ. ತನಿಖೆ ಮುಗಿದ ನಂತರ ಮಾತನಾಡಿ ಎಂದಿದ್ದರು.
ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಕೂಗಿದಾಗಲೂ ಹೀಗೇ ಆಯ್ತು. ಆ ಥರ ಕೂಗೇ ಇಲ್ಲ ಎಂದು ಮಂತ್ರಿಗಳು ಸರ್ಟಿಫಿಕೇಟ್ ಕೊಟ್ಟರು. ಜಾಮೀನು ಸಿಗುವ ಕೇಸ್ ಹಾಕಿದರು. ಎಫ್ ಎಸ್ ಎಲ್ ರಿಪೋರ್ಟ್ ಬಂದ ಮೇಲೆ ಕೂಗಿದ್ದು ಹೌದು ಎಂದು ಸಾಬೀತಾಯ್ತು.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗಲೂ ಹೀಗೆ ಮಾಡಿದರು.
ಕಾಂಗ್ರೆಸಿಗರು ದೇಶದ ಐಕ್ಯತೆಗೆ ಧಕ್ಕೆ ತರುವ ಕೃತ್ಯಗಳನ್ನು ಖಂಡಿಸುವಲ್ಲೂ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
