ವಿಶ್ವ ಪರಿಸರ ದಿನದ ಅಂಗವಾಗಿ ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್ ಜಾಥ
(Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿ ಸಿ ಘಟಕ ಮತ್ತು ಐ ಐ ಸಿ ಘಟಕವು ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕೊನೆಗೊಳಿಸುವುದು”ಎಂಬ ವಿಷಯದ ಮೇಲೆ ಬೃಹತ್‌ಜಾಥವನ್ನು ಶಂಕರಪುರದಿಂದ ಕಾಲೇಜಿನವರೆಗೆ ಆಯೋಜಿಸಲಾಗಿತ್ತು. ಈ ಜಾಥದಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ. ರಾಧಾಕೃಷ್ಣಎಸ್ ಐತಾಳ್ ರವರು ಹಸಿರು ಧ್ವಜವನ್ನು ಹಾರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಪ್ರತಿಬಿಂಬಿಸುವ ಫಲಕವನ್ನು ಹಿಡಿದು ಜಾಥದಲ್ಲಿ ಪಾಲ್ಗೊಂಡರು.
ಡಾ. ರಾಧಕೃಷ್ಣ ಐತಾಳ್ ರವರು ಮಾತನಾಡಿ, ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ತುರ್ತು ಅಗತ್ಯತೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಸಾಮೂಹಿಕ ಪ್ರತಿಜ್ಞೆ ನೆರವೇರಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಯ ಬಗ್ಗೆ ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕಾಲೇಜು ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.

