ಶಿರಾಡಿ ಘಾಟ್ ಬಳಿ ಭೀಕರ ಅಪಘಾತ: ಪಾಣೆಮಂಗಳೂರು ಮೂಲದ ತಾಯಿ–ಮಗ ಮೃತ್ಯು
(Bantwala) ಬಂಟ್ವಾಳ: ರಾ.ಹೆ.75 ರ ಶಿರಾಡಿ ಘಾಟ್‌ನ ಕೆಂಪುಹೊಳೆಯಲ್ಲಿ ಇನ್ನೋವಾ ಹಾಗೂ ಕಂಟೈನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಬೊಂಡಾಲ ನಿವಾಸಿಗಳಾದ ತಾಯಿ – ಮಗ ಮೃತಪಟ್ಟರೆ, ಇತರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ಸಮೀಪದ ಬೊಂಡಲ ನಿವಾಸಿಗಳಾದ ಶಬೀರ್ ಅಹಮ್ಮದ್ ಎಂಬವರ ಪತ್ನಿ ಶಫಿಯಾ(50) ಹಾಗೂ ಅವರ ಪುತ್ರ ಶಫೀಕ್ (20) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಮಕ್ಕಳಿದ್ದು, ಅವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಢಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಮೇ 20 ರಂದು ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಇನೋವಾ ಕಾರಿನಲ್ಲಿ ತೆರಳಿದ್ದ ಈ ಕುಟುಂಬ. ಸೋಮವಾರ ಮಧ್ಯರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಮರಳುತ್ತಿದ್ದಾಗ ಶಿರಾಡಿ ಘಾಟ್‌ನ ಕೆಂಪುಹೊಳೆ ಬಳಿ ಎದುರಿನಿಂದ ಬಂದ ಕಂಟೈನರ್ ಲಾರಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಮೃತ ಶಫೀಕ್ ಕಾರು ಚಲಾಯಿಸುತ್ತಿದ್ದು, ಈತ ಕೊಣಾಜೆಯ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.

