ಶ್ರೀ ಕ್ಷೇತ್ರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವ ಸೆ. 29ರಂದು ಕೊಲ್ಲೂರಿನಲ್ಲಿ ಸಮಾಪ್ತಿ
(Katapadi) ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕ ಜಾತಿ ಧರ್ಮ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಅಷ್ಟೋತ್ತರ ಶತ ಪುಣ್ಯಕ್ಷೇತ್ರ ಪ್ರದಕ್ಷಿಣೆಯ ಪರಿಸಮಾಪ್ತಿಯು ಕೊಲ್ಲೂರು ಶ್ರೀ ಮುಕಾಂಬಿಕಾ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶ್ರೀ ಚಂಡಿಕಾಯಾಗ ಪೂರ್ವಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೆ.29ರಂದು ಜರಗಲಿದೆ ಎಂದು ಗುರೂಜಿ ತಿಳಿಸಿದರು.
ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ, ಜೂ.14 ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯನ್ನು ಆರಂಭಿಸಲಾಗಿತ್ತು. ಕ್ಷೇತ್ರ ಪ್ರದಕ್ಷಿಣೆಯ ಸಂದರ್ಭ ಅಭೂತಪೂರ್ವವಾಗಿ ಸ್ಪಂದಿಸಿ, ಸಹಕಾರವನ್ನು ನೀಡಿದ ಕ್ಷೇತ್ರದ ಅರ್ಚಕರು, ಮುಖ್ಯಸ್ಥರಿಗೆ ಧರ್ಮ ರಾಷ್ಟ್ರ ಯೋಧರು ಮತ್ತು ಗೋವುಗಳ ರಕ್ಷಣೆ, ಮತಾಂತರ ತಡೆಯುವ ಬಗ್ಗೆ ಮನವಿಯನ್ನು ನೀಡಿ ಕ್ಷೇತ್ರದ ಇತಿಹಾಸವನ್ನು ತಿಳಿದು ಬಿಲ್ವ ಪತ್ರೆಯ ಗಿಡವನ್ನು ನೀಡಿ ಪ್ರಾರ್ಥನೆಯನ್ನು ಸಲ್ಲಿಸಲಾಗಿತ್ತು.
ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವದ ಸಂದರ್ಭ ಅಪಾರ ಸಂಖ್ಯೆಯ ದೇಶ ಭಕ್ತರು, ಸಾಧು-ಸಂತರು, ಹಾಗೂ ಮಠದ ಅಭಿಮಾನಿ ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶ್ರೀ ಕ್ಷೇತ್ರದ ಟ್ರಸ್ಟ್ ಅಧಕ್ಷ ಸುಧಾಕರ ಶೆಟ್ಟಿ, ಮಠದ ಟ್ರಸ್ಟಿ ಗೀತಾಂಜಲಿ ಎಮ್. ಸುವರ್ಣ, ವೀಣಾ ಎಸ್.ಶೆಟ್ಟಿ, ರಾಘವೇಂದ್ರ ಪ್ರಭೂ ಕರ್ವಾಲು ಉಪಸ್ಥಿತರಿದ್ದರು.

