ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಡುಬಿದ್ರಿ ದೇವಳ ಜೀರ್ಣೋದ್ಧಾರಕ್ಕೆ 25 ಲಕ್ಷ ರೂ. ಡಿ ಡಿ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಆನಂದ ಸುವರ್ಣ ಹಾಗೂ ಭರತ್ ರಾಜ್ ರವರಿಂದ ಸಮಿತಿಗೆ ಹಸ್ತಾಂತರ
(ಚಿತ್ರ ಕೃಪೆ: ರವಿ ಡಿಜಿಟಲ್ಸ್ ಪಡುಬಿದ್ರಿ)
(Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು 25 ಲಕ್ಷರೂ. ದೇಣಿಗೆ ನೀಡಿದ್ದಾರೆ.
ಮುಂದಿನ ತಿಂಗಳು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನೀಡಿರುವ 25.ಲಕ್ಷ ರೂ. ಡಿ.ಡಿ.ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕ ಆನಂದ ಸುವರ್ಣ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗಮಿಸಿರುವ ಭರತ್ ರಾಜ್ ರವರು ಜೀರ್ಣೋದ್ಧಾರ ಸಮಿತಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಆನಂದ ಸುವರ್ಣರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಿರಂತರವಾಗಿ ಧನ ಸಹಾಯ ಮಾಡಲಾಗುತ್ತಿದೆ. ಪರಿಸರದ ಹೆಚ್ಚಿನ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಿಗೆ ಧನ ಸಹಾಯ ಮಾಡುತ್ತಿದೆ. ಖಾವಂದರ ಆಶಯದಂತೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ 25 ಲಕ್ಷ ರೂ. ನೀಡಲಾಗಿದೆ ಎಂದರು.
ದೇವಳದ ಅನುವಂಶೀಯ ಮೊಕ್ತೇಸರ ರತ್ನಕರ್ ರಾಜ್ ಅರಸ್ ಕಿನ್ನಕ್ಕ ಬಳ್ಳಾಲ್ ಮಾತನಾಡಿ, ಮಾನ್ಯ ವೀರೇಂದ್ರ ಹೆಗ್ಗಡೆಯವರನ್ನು ನಮ್ಮ ದೇಗುಲಕ್ಕೆ ಕರೆಸಿ, ಇಲ್ಲಿ ನಡೆಯುತ್ತಿರುವ ಕಾಮಗಾರಿಯ ಮಾಹಿತಿ ನೀಡಿದರೆ, ಶ್ರೀ ಕ್ಷೇತ್ರದಿಂದ ಇನ್ನಷ್ಟು ಧನ ಸಹಾಯ ಸಿಗಬಹುದು ಎಂದರು.
ಈ ಸಂದರ್ಭ ದೇವಳದ ಅನುವಂಶೀಯ ಮೊಕ್ತೇಸರ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀನಾಥ ಹೆಗಡೆ, ಸಮಿತಿಯ ವೈ ಎನ್ ರಾಮಚಂದ್ರ ರಾವ್, ನಟರಾಜ್ ಪಿಎಸ್, ವಿಷ್ಣುಮೂರ್ತಿ ಪಾದೆಬೆಟ್ಟು, ಅನಿಲ್ ಶೆಟ್ಟಿ ಪೇಟೆಮನೆ, ಕೇಶವ ಅಮೀನ್, ಸುಕೇಶ್ ರಾಜ್ ಅರಸು, ವೈ. ಸುಕುಮಾರ್, ರಾಜೇಶ್ ಪಡುಬಿದ್ರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಜನ ಜಾಗೃತಿ ಸಮಿತಿಯ ಪದಾಧಿಕಾರಿಗಳಾದ ಸುಧಾಕರ್ ಕರ್ಕೇರ, ಕೇಶವ ಅಮೀನ್, ಒಕ್ಕೂಟದ ಅಧ್ಯಕ್ಷ ಭುಜಂಗ ಆಚಾರ್ಯ, ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

