ಸಮುದ್ರಕ್ಕೆ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ ಮತ್ತೋರ್ವನಿಗಾಗಿ ಶೋಧ
(Kundapura) ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಯುವಕರಬ್ಬರು ಸಮುದ್ರಪಾಲಾಗಿರುವ ಘಟನೆ ಶನಿವಾರ ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ.
ಘಟನೆಯಲ್ಲಿ ನೀರುಪಾಲಾಗಿದ್ದ ಕುಂದಾಪುರ ಮೂಲದ ಅಜಯ್ ಮೃತಪಟ್ಟಿದ್ದು, ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರು ಪಾಲಾದ ಮತ್ತೊಬ್ಬ ಯುವಕ. ಈತನಿಗಾಗಿ ಹುಡುಕಾಟ ಮುಂದುವರೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ.
ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನ ದಾಸರಹಳ್ಳಿಯಿಂದ ಕುಂದಾಪುರಕ್ಕೆ ಬಂದಿದ್ದು, ಬೀಜಾಡಿ ಬೀಚ್ ಪಕ್ಕದ ರೆಸಾರ್ಟೊದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ತನ್ನ ಇನ್ನಿಬ್ಬರು ಸ್ಥಳೀಯ ಸ್ನೇಹಿತರ ಜೊತೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರಪಾಲಾಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಇಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

