ಸೌದಿ ಅರೇಬಿಯಾ : ಪಡುಬಿದ್ರಿ ಮೂಲದ ಅನಿವಾಸಿ ಉದ್ಯಮಿ ಮೊಹಮ್ಮದ್ ಅರ್ಷದ್ಗೆ ಪ್ರಶಸ್ತಿ
ಮಲೇಷ್ಯಾದ ‘ಎಕ್ಸಲೆನ್ಸ್ ಇನ್ ಕಾಂಟ್ರಾಕ್ಟಿಂಗ್ ಆಂಡ್ ಎಕ್ವಿಪ್ಮೆಂಟ್ ರೆಂಟಲ್‘ ಪ್ರಶಸ್ತಿ
(Padubidri) ಪಡುಬಿದ್ರಿ: ಸೌದಿ ಅರೇಬಿಯಾದಲ್ಲಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ ಅನಿವಾಸಿ ಉದ್ಯಮಿ ಮೊಹಮ್ಮದ್ ಅರ್ಷದ್ ಅಬ್ದುಲ್ ರೆಹಮಾನ್ ಅವರು ಮಲೇಷ್ಯಾದಲ್ಲಿ ನಡೆದ ‘ಕ್ಲಸ್ಟರ್ ಆಫ್ ಅಚೀವರ್ಸ್’ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಎಕ್ಸಲೆನ್ಸ್ ಇನ್ ಕಾಂಟ್ರಾಕ್ಟಿಂಗ್ ಆಂಡ್ ಎಕ್ವಿಪ್ಮೆಂಟ್ ರೆಂಟಲ್’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಲಭಿಸಿದ ಈ ಪ್ರಶಸ್ತಿಯು, ಅರ್ಷದ್ ಹಾಗೂ ಅವರ ಪ್ರಾಸ್ಪೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆಯು ಬೆಳವಣಿಗೆಗೆ ಶ್ರಮಿಸುತ್ತಿರುವ ತಂಡದ ಸಾಧನೆಗೆ ಸಂದ ಗೌರವವಾಗಿದೆ.
ಪಡುಬಿದ್ರಿ ಮೂಲದ ಮೊಹಮ್ಮದ್ ಅರ್ಷದ್ ಅಬ್ದುಲ್ ರೆಹಮಾನ್ ಅವರು ೨೦೧೨ರಲ್ಲಿ ತಮ್ಮ ̄21 ನೇ ವಯಸ್ಸಿನಲ್ಲಿ ವೃತ್ತಿಜೀವನ ಆರಂಭಿಸಿದ್ದು, ಒಂದು ದಶಕದ ಅನುಭವದ ಬಳಿಕ 2022 ರಲ್ಲಿ ಪ್ರಾಸ್ಪೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.
ಪ್ರಸ್ತುತ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ನೂರಾರು ಸ್ವಂತ ಉಪಕರಣಗಳು ಮತ್ತು ವಾಹನಗಳನ್ನು ಹೊಂದಿರುವ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.
ಸೌದಿ ಅರೇಬಿಯಾದ ಜುಬೈಲ್ ಕೇಂದ್ರವಾಗಿರುವ ಪ್ರಾಸ್ಪೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆಯು, ಭಾರತ ಹಾಗೂ ಬಹ್ರೇನ್ನಲ್ಲಿ ಉದ್ಯಮ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ.

