ಹಳೆಯಂಗಡಿ: “ಪೀಡಿತ್” ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ
ಗ್ರಾಮೀಣ ಭಾಗದ ಕಲಾ-ತಂತ್ರಜ್ಞರಿಗೆ ಅವಕಾಶ ನೀಡೋಣ : ವಸಂತ ಬೆರ್ನಾಡ್
(Moolki)ಮೂಲ್ಕಿ: ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರಿಗೆ, ಕಲಾ ತಂತ್ರಜ್ಞರನ್ನು ಪ್ರೋತ್ಸಾಹಿಸಿದಲ್ಲಿ ಮುಂದೊಂದು ದಿನ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ಹೇಳಿದರು.
ಅವರು ಹಳೆಯಂಗಡಿ ಬಿಲ್ಲವ ಭವನದಲ್ಲಿ ನಡೆದ ಪೀಡಿತ್ ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸಿನಿಮಾ ಕ್ಷೇತ್ರ ವಿಸ್ತಾರವಾಗಿದ್ದು, ಹಲವು ಯುವ ಜನತೆ ತಮ್ಮ ಕೌಶಲ್ಯವನ್ನು ಪ್ರದರ್ಶನ ಮಾಡುವ ಮೂಲಕ ಜನ ಮೆಚ್ಚುಗೆ ಗಳಿಸುತ್ತಿದ್ದಾರೆ. ಪೀಡಿತ್ ಹಿಂದಿ ಸಿನಿಮಾವೂ ಸಹ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳಿಂದ ಗೌರವ ಪಡೆಯಲಿ ಎಂದು ಹಾರೈಸಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿ, ಸಿನಿಮಾ ಕ್ಷೇತ್ರವು ಮನರಂಜನೆಯೊಂದಿಗೆ ಜಾಗೃತಿ ಮೂಡಿಸುವ ಕ್ಷೇತ್ರವಾಗಿದೆ. ಉತ್ತಮ ಚಿತ್ರಕ್ಕೆ ಅವಕಾಶವನ್ನು ಮಾಡಿಕೊಟ್ಟು ಸಾಂಸ್ಕೃತಿಕವಾಗಿ ಬಿಲ್ಲವ ಸಂಘದ ವೇದಿಕೆಯನ್ನು ನೀಡುತ್ತಿದ್ದೇವೆ. ಕಲಾವಿದರನ್ನು ಪೋಷಿಸುವುದರೊಂದಿಗೆ ಅವರಿಗೆ ಆಸರೆಯಾಗುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಭಾಸ್ಕರ ಸಾಲ್ಯಾನ್ ಮಾತನಾಡಿ, ಹೊಸತನದ ಹುರುಪಿನೊಂದಿಗೆ ಕಲಾವಿದರು ಪೀಡಿತ್ ಸಿನಿಮಾವನ್ನು ಮನ ಮುಟ್ಟುವಂತಹ ಚಿತ್ರವನ್ನಾಗಿ ನಿರ್ಮಿಸಿದ್ದಾರೆ. ಈ ಚಿತ್ರ ಇನ್ನಷ್ಟು ಜನರಿಗೆ ತಲುಪಲಿ ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದರು.
ಶ್ರೀಗುರು ನಮನಸಂತೃಪ್ತಿ ಸಿನಿಮಾ ತಂಡದೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದ ಜಂಟಿ ಸಂಯೋಜನೆಯಲ್ಲಿ ಚಿತ್ರವನ್ನು ಉಚಿತವಾಗಿ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಅದೃಷ್ಟ ಪ್ರೇಕ್ಷಕ ಉಡುಗೊರೆಯನ್ನು ಯೋಗೀಶ್ ಪಾವಂಜೆ ಅವರಿಗೆ ವಸಂತ ಬೆರ್ನಾಡ್ ಅವರು ನೀಡಿ ಗೌರವಿಸಿದರು.
ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಸುವರ್ಣ, ಯುವವಾಹಿನಿ ಘಟಕದ ಅಧ್ಯಕ್ಷೆ ಹಿತಾಕ್ಷಿ ನಾರಾಯಣ್, ಉಪನ್ಯಾಸಕ ರವಿರಾಜ್ ಮಂಗಳೂರು, ಸಿನಿಮಾದ ಸಹ ನಿರ್ಮಾಪಕ ಸುರೇಶ್ ವರ್ಕಾಡಿ, ನಿರ್ದೇಶಕ ದೇವಿಪ್ರಕಾಶ್, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಕಲಾವಿದರಾದ ಧರ್ಮಾನಂದ ಶೆಟ್ಟಿಗಾರ್ ತೋಕೂರು, ನಾಗರಾಜ್ ಪೂಜಾರಿ ಬಪ್ಪನಾಡು, ಸುರೇಶ್ ಶೆಟ್ಟಿಗಾರ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಚಿತ್ರವನ್ನು ವೀಕ್ಷಿಸಿದ ಹಲವು ಮಂದಿ ಪ್ರಶಂಸೆ ವ್ಯಕ್ತಪಡಿಸಿದರು.

