ಹವಾಮಾನ ಮಾಹಿತಿ : ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಆವಿಷ್ಕಾರ
ಯೋಜನೆ ಉದ್ಘಾಟಿಸಿದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು
(Bantaka) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಥಳೀಯ ಹವಾಮಾನ ಮತ್ತು ಗಾಳಿಯ ಗುಣಮಟ್ಟದ ಮಾಹಿತಿಯನ್ನು ನೈಜ ಸಮಯದಲ್ಲಿ ದಾಖಲಿಸುವ ಉದ್ದೇಶದಿಂದ “ಸ್ಮಾರ್ಟ್ ವೆದರ್ನೆಟ್”ಎಂಬ ಸುಧಾರಿತ ಹವಾಮಾನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಯೋಜನೆಯನ್ನು ಸಂಸ್ಥೆಯ ಆವರಣದಲ್ಲಿ ಶ್ರೀ ಸೋದೆ ವಾದಿರಾಜ ಮಠದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಐಐಟಿ ಧಾರವಾಡದ ನಿರ್ದೇಶಕರಾದ ಡಾ. ವೆಂಕಪ್ಪಯ್ಯ ದೇಸಾಯಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ರಂಗಸ್ವಾಮಿ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲಡಾ. ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಸಂಸ್ಥೆಯ ಸಂಶೋಧನ ಅಭಿವೃದ್ಧಿ ವಿಭಾಗದ ಡೀನ್ ಡಾ. ಸಚಿನ್ ಭಟ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಡೇವಿಡ್ ಜಾನ್ ಸಲ್ಡಾನ್ಹ ಇವರ ಸಹಕಾರದೊಂದಿಗೆ ವಿದ್ಯಾರ್ಥಿಗಳಾದ ಮಣಿಕಂಠ ಸಿ ಎಚ್, ಆದಿತ್ಯ ತುಂಗ, ಕೆ ಮನೀಶ್ ಕುಮಾರ್, ಮದನ್, ಪೃಥ್ವಿಶ್ ಕುಮಾರ್ ಹಾಗೂ ಶಶಾಂಕ ಎಸ್ ಅಭಿವೃದ್ದಿ ಪಡಿಸಿದ್ದಾರೆ.
ಸ್ಥಳೀಯ ಹವಾಮಾನದ ನಿಖರ ಮಾಹಿತಿ:
ಸಾಂಪ್ರದಾಯಿಕ ಹವಾಮಾನ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಅವುಗಳನ್ನು ಎಲ್ಲಾ ಪ್ರದೇಶದಲ್ಲಿ ಸ್ಥಾಪಿಸುವುದು ಕಷ್ಟ ಇದರಿಂದ ಸ್ಥಳೀಯ ಮಟ್ಟದ ಹವಾಮಾನ ವ್ಯತ್ಯಾಸವನ್ನು ಗುರುತಿಸುವಲ್ಲಿ ಮಿತಿಗಳಿರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದಾದ ಹವಾಮಾನ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಈ ಸ್ಮಾರ್ಟ್ ವೆದರ್ನೆಟ್ನ ಪ್ರಮುಖ ಉದ್ದೇಶವಾಗಿದೆ.
ಉಡುಪಿ ಜಿಲ್ಲಾದ್ಯಂತ ಹವಾಮಾನ ಕೇಂದ್ರಗಳ ಜಾಲ:
ಉಡುಪಿ ಜಿಲ್ಲೆಯ ಕರಾವಳಿ, ನಗರ, ಗ್ರಾಮೀಣ ಮತ್ತು ಕೃಷಿ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳು ವಿಭಿನ್ನವಾಗಿರುತ್ತವೆ. ಈ ವ್ಯತ್ಯಾಸಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳ ಮಾಹಿತಿಯನ್ನು ಒಂದೇ ವ್ಯವಸ್ಥೆಯಡಿ ಸಂಯೋಜಿಸುವುದು ಯೋಜನೆಯ ಮುಂದಿನ ಗುರಿ.
ಹವಾಮಾನ ಸಂಶೋಧನೆ ಮತ್ತು ಮುನ್ಸೂಚನೆಗೆ ನೆರವು :
ದೀರ್ಘಕಾಲದವರೆಗೆ ಸಂಗ್ರಹವಾಗುವ ಹವಾಮಾನ ದತ್ತಾಂಶವು ಸ್ಥಳೀಯ ಹವಾಮಾನದ ಪ್ರವೃತ್ತಿಗಳು ಮತ್ತು ಕಾಲಾನುಸಾರ ಉಂಟಾಗುವ ಬದಲಾವಣೆಗಳನ್ನು ವಿಶ್ಲೇಷಿಸಲು ಉಪಯುಕ್ತವಾಗಲಿದೆ ಈ ಮಾಹಿತಿಯನ್ನು ಇತರ ಹವಾಮಾನ ಮೂಲಗಳಿಂದ ಲಭ್ಯವಾಗುವ ದತ್ತಾಂಶದೊAದಿಗೆ ಸಂಯೋಜಿಸಿ ವೈಜ್ಞಾನಿಕ ಅದ್ಯಯನಗಳಿಗೆ ಬಳಸಬಹುದಾಗಿದೆ.
ಕೃಷಿ, ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆಗೆ ಉಪಯೋಗ:
ಸ್ಥಳೀಯ ಪರಿಸರದ ಕುರಿತು ವಿಶ್ವಾಸಾರ್ಹ ದತ್ತಾಂಶ ಲಭ್ಯವಿರುವುದು, ಕೃಷಿಯೋಜನೆ, ಜಲಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ಅಧ್ಯಯನದಂತಹ ಕ್ಷೇತ್ರಗಳಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗಬಹುದು. ಇಂತಹ ಮಾಹಿತಿಯು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಬಳಸುವ ಮತ್ತು ಪರಿಸರ ಸಂಬAಧಿತ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಿಗೆ ಪೂರಕವಾಗಲಿದೆ.
ವೆಬ್ಸೈಟ್ ಮೂಲಕ ಸಾರ್ವಜನಿಕರಿಗೆ ಮಾಹಿತಿ
“ಸ್ಮಾರ್ಟ್ ವೆದರ್ನೆಟ್ ಮೂಲಕ ಸಂಗ್ರಹವಾಗುವ ಮಾಹಿತಿಯನ್ನು ಸಾರ್ವಜನಿಕರು https://sode-edu.in/smvitm/weathernet/ಮೂಲಕ ಆನ್ಲೈನ್ನಲ್ಲಿ ವೀಕ್ಷಿಸಬಹುದು.

