• Home  
  • ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ (Folklore Kangeel Seva celebration in Hejamady, different types of dance)
- ಧಾರ್ಮಿಕ - ವಿಡಿಯೋ

ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ (Folklore Kangeel Seva celebration in Hejamady, different types of dance)

Share: ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ ಗ್ರಾಮದ ಮಾರಿ ಓಡಿಸುವ ಕಂಗೀಲು ಸೇವೆ ಕೃಪೆ : ಹರೀಶ್‌ ಹೆಜ್ಮಾಡಿ (Hejamady) ಹೆಜಮಾಡಿ: ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಗ್ರಾಮದ ಮಾರಿ ಓಡಿಸುವ ಜನಪದೀಯ ಕಂಗೀಲು ಸೇವೆ ಹೆಜಮಾಡಿ ಗ್ರಾಮದಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ನಡೆಯಿತು. ಊರಿಗೆ ಬಂದ ಮಾರಿಯನ್ನು ಓಡಿಸುವ ನಂಬಿಕೆಯೊಂದಿಗೆ ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ಆರಾಧಕರು ನಿಗದಿತ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಕಂಗೀಲು ಕುಣಿತ ಸಾಕ್ಷಿಯಾಗಿದೆ. ಕರಾವಳಿ ಭಾಗದಲ್ಲಿ ತನ್ನದೇ […]

ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ

ಗ್ರಾಮದ ಮಾರಿ ಓಡಿಸುವ ಕಂಗೀಲು ಸೇವೆ

ಕೃಪೆ : ಹರೀಶ್‌ ಹೆಜ್ಮಾಡಿ

(Hejamady) ಹೆಜಮಾಡಿ: ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಗ್ರಾಮದ ಮಾರಿ ಓಡಿಸುವ ಜನಪದೀಯ ಕಂಗೀಲು ಸೇವೆ ಹೆಜಮಾಡಿ ಗ್ರಾಮದಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ನಡೆಯಿತು.

ಊರಿಗೆ ಬಂದ ಮಾರಿಯನ್ನು ಓಡಿಸುವ ನಂಬಿಕೆಯೊಂದಿಗೆ ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ಆರಾಧಕರು ನಿಗದಿತ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಕಂಗೀಲು ಕುಣಿತ ಸಾಕ್ಷಿಯಾಗಿದೆ.

ಕರಾವಳಿ ಭಾಗದಲ್ಲಿ ತನ್ನದೇ ಆದ ಐತಿಹ್ಯ ಹೊಂದಿರುವ ಹಲವಾರು ಜನಪದೀಯ ಆಚರಣೆಗಳು ಸಂಪ್ರದಾಯ ಬದ್ಧವಾಗಿ ಇಂದಿಗೂ ಮುಂದುವರಿಯುತ್ತಿದೆ. ಮೊದಲಾಗಿ ಕಂಗೀಲು ಕುಣಿತವನ್ನು ತಲಾ ೩ ದಿನಗಳ ಕಾಲ ನಡೆಸಲಾಗುತ್ತಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಹೆಜಮಾಡಿಯಲ್ಲಿ ಎರಡು ವರ್ಷಗಳಿಗೊಮ್ಮೆ ಒಂದು ದಿನ ಮಾತ್ರ ಈ ಆಚರಣೆ ಮುಂದುವರಿದಿದೆ.

ಹೆಜಮಾಡಿಯ ಬಸ್ತಪಡ್ಪು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಆಯನದ ಮರುದಿನ (ಮಾಯಿ ಹುಣ್ಣಿಮೆಯ ಮರು ದಿನ) ಹೆಜಮಾಡಿಯಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಹೆಜಮಾಡಿ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಸ್ಥಳಕ್ಕೆ ಸಂಬಂಸಿದ ಆರಾಧಕರು ಊರಿನ ಮಾರಿ ದೂರ ಮಾಡುವ ಕಂಗೀಲು ಕುಣಿತವನ್ನು ನಡೆಸಿಕೊಡುತ್ತಾ ಬಂದಿದ್ದಾರೆ.

ವಿಶಿಷ್ಟ ರೀತಿಯ ಚಾಲನೆ: ತೆಂಗಿನ ಸಿರಿಗಳನ್ನು ಹೆಜಮಾಡಿ ಶ್ರೀ ಧೂಮಾವತಿ ದೈವದ ಕಲದಲ್ಲಿಟ್ಟು ಪ್ರಾರ್ಥಿಸಿ ಮೆರವಣಿಗೆ ಮೂಲಕ ಪರಿಕರಗಳೊಂದಿಗೆ ಆಗಮಿಸಿ ಹೆಜಮಾಡಿ ಶ್ರೀ ಬ್ರಹ್ಮಸ್ಥಾನದ ಬಳಿ ಇರುವ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಆದಿಯಲ್ಲಿರಿಸಿ ಸಮಾಜದ ಮುಖಂಡರು ಹಾಗೂ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಗ್ರಾಮ ದೇವರ ಸಹಿತ ಅಲ್ಲಿನ ದೈವಗಳಿಗೆ ಪ್ರಾರ್ಥಿಸಿ ಕಂಗೀಲು ಆಚರಣೆಗೆ ಶನಿವಾರ ಚಾಲನೆ ನೀಡಲಾಯಿತು.

ಭೂಮಿಯಲ್ಲಿ ಅಧರ್ಮ ತಾಂಡವವಾಡುತ್ತಿರುವ ಆ ಸಂದರ್ಭದಲ್ಲಿ ಶ್ರೀಕೃಷ್ಣ ದೇವರು ಕೊರಗಜ್ಜನ ರೂಪದಲ್ಲಿ ಗೋಪಿಕಾ ಸ್ತ್ರೀಯರನ್ನು ಸಿರಿಗಳಾಗಿ ಒಟ್ಟು ಸೇರಿಸಿಕೊಂಡು ಭೂಮಿಗೆ ಬಂದನೆಂದು ಐತಿಹ್ಯ ಹೊಂದಲಾಗಿದೆ. ಜನರಿಗೆ ಬಂದ ಕಷ್ಟ, ಕೋಟಲೆ, ದುರಿತ, ದುಮ್ಮಾನ, ರೋಗ, ರುಜಿನಗಳನ್ನು ದೂರ ಮಾಡುವ ಸಂಪ್ರದಾಯ ಕಂಗೀಲು ಕುಣಿತದಲ್ಲಿದೆ. ಇದಕ್ಕೆ ಸಂಬಂಧಿಸಿ ಪಾಡ್ದನ ಹಾಡಿನೊಂದಿಗೆ ಹೆಜಮಾಡಿಯಲ್ಲಿ ನಡೆದ ಕಂಗೀಲು ಕುಣಿತ ತಂಡದಲ್ಲಿ ಕೊರಗಜ್ಜ ಸೇರಿದಂತೆ ಏಳು ಕಲಾವಿದರ ತಂಡವಿತ್ತು.

ಕಂಗೀಲು ಕುಣಿತದ ಹಾದಿ: ಆದಿ ಸ್ಥಳವಾದ ಹೆಜಮಾಡಿ ಮುಗ್ಗೇರ್ಕಳ ದೈವಸ್ಥಾನದಲ್ಲಿ ಕಂಗೀಲು ಸಿರಿಕಟ್ಟಿ ಬ್ರಹ್ಮಸ್ಥಾನವಾಗಿ ಹೆಜಮಾಡಿ ಅಳಿವೆ ಕೋಡಿಯಿಂದ ಶ್ರೀ ವೀರಮಾರುತಿ ದೇವಸ್ಥಾನ, ಪಲಿಮಾರು, ಚರಂತಿಪೇಟೆ, ಬಪ್ಪನಾಡು, ಮಾನಂಪಾಡಿಕೋಡಿ, ಪರಪಟ್ಟ, ಹೊಸಾಗ್ಮೆ, ಕಡವಿನಬಾಗಿಲು, ಗುಂಡಿಯಿಂದ ದೊಡ್ಡಮನೆ ತೋಟವಾಗಿ ಮಟ್ಟಪಟ್ಣ ಭಜನಾ ಮಂದಿರದ ಬಳಿಯಿಂದ ಉತ್ತರ ಸುಲ್ತಾನ್ ರಸ್ತೆಗಾಗಿ ಹೆಜಮಾಡಿ ಗಡುವಿನಲ್ಲಿ ಸಿರಿ ಬಿಡುವ ಮೂಲಕ ಊರಿನ ಮಾರಿಯನ್ನು ಓಡಿಸುವ ಪ್ರಕ್ರಿಯೆ ಸಾಂಗವಾಗಿ ನಡೆಯಿತು.

ಕಂಗೀಲು ಕುಣಿತ ಊರು ಸಂಚರಿಸುವ ಸಮಯದಲ್ಲಿ ಗ್ರಾಮಸ್ಥರು ಹರಕೆಯ ರೂಪದಲ್ಲಿ ಕೊರಗಜ್ಜನಿಗೆ ತೆಂಗಿನಕಾಯಿ, ಅಕ್ಕಿ, ಮಂಡಕ್ಕಿ, ಶೇಂದಿ ಹಾಗೂ ಹಣದ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಾರೆ.

ಅತೀ ಹೆಚ್ಚು ದೈವ ದೇವರುಗಳ ನಾಡು ಹೆಜಮಾಡಿಯಲ್ಲಿ ಗ್ರಾಮಸ್ಥರು ಭಯ ಭಕ್ತಿಯಿಂದ ಕಂಗೀಲು ಕುಣಿತವನ್ನು ಸ್ವಾಗತಿಸುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕೊರಗಜ್ಜನಲ್ಲಿ ಭಿನ್ನವಿಸಿಕೊಂಡು ಪರಿಹಾರ ಪಡೆಯುತ್ತಾರೆ.

ಕಂಗೀಲು ಕುಣಿತದ ಸಂಪ್ರದಾಯಬದ್ಧ ಆಚರಣೆಯ ಮಹತ್ವ ಉಳಿಯಬೇಕು. ನಂಬಿಕೆಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ಮುಗ್ಗೇರ್ಕಳ ಸಮಾಜದ ಹಿರಿಯರು ಕಳಕಳಿಯಿಂದ ವಿನಂತಿಸುತ್ತಾರೆ.

 ಸ್ತಳೀಯ ಸಮಾಜದ ಮುಖಂಡ ನಿತಿನ್‌ ಕುಮಾರ್‌ ಮಾತನಾಡಿ, ಆರೂಢ ಪ್ರಶ್ನೆಯಲ್ಲಿ ಕಂಡುಬಂದ ಕಾರಣ ಈ ಹಿಂದೆ ಒಂದು ಬಾರಿ ನಿಂತು ಹೋಗಿದ್ದ ಕಂಗೀಲು ಸೇವೆಯನ್ನು ಪುನರಾರಂಭಿಸಲಾಗಿದೆ. ಪ್ರತಿಯೊಬ್ಬರೂ ಹಿಂದಿನ ಶಿಷ್ಟಾಚಾರವನ್ನು ಕಲಿತು ಶಾಸ್ತ್ರಬದ್ಧವಾಗಿ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

 ಕೊರಗಜ್ಜ ಪಾತ್ರಧಾರಿ ಆನಂದ ಪಾತ್ರಿ ಯವರು ಮಾತನಾಡಿ, ೧೨ನೇ ವಯಸ್ಸಿನಿಂದ ಸಿರಿ ಕಟ್ಟಿ ಕಂಗೀಲು ಸೇವೆ ಸಲ್ಲಿಸುತ್ತಾ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಕೊರಗಜ್ಜನ ರೂಪದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಇದೀಗ ೬೮ ವರ್ಷ ಪ್ರಾಯವಾದರೂ ದೇವರ ದಯೆಯಿಂದ ಸೇವೆ ನಿರಾತಂಕವಾಗಿ ನಡೆದಿದೆ ಎಂದರು.

 ಕಾಪುವಿನ ಖ್ಯಾತ ಜನಪದ ವಿದ್ವಾಂಸ ಗುರುಚರಣ್ ಕಾಪು ಮಾತನಾಡಿ, ಇತ್ತೀಚೆಗೆ ಎಳೆಯರೂ ಕಂಗೀಲು ಕುಣಿತದತ್ತ ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಮುಂದೆಯೂ ಕಂಗೀಲು ಕುಣಿತ ಮುಂದುವರಿಯುತ್ತದೆ. ಗ್ರಾಮದ ಮಾರಿ ಓಡಿಸುವ ಜನಪದೀಯ ಕಂಗೀಲು ಕುಣಿತ ಉಳಿಸಿ ಬೆಳೆಸಲು ಪ್ರಯತ್ನ ಮುಂದುವರಿದಿದೆ ಎಂದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.