ಹೆಜಮಾಡಿ, ಕಾಪುವಿನಲ್ಲಿ ಬಿರುಸುಗೊಂಡ ಕಡಲ್ಕೊರೆತ : ಕಡಲ್ಕೊರೆತ ಸ್ಥಳಕ್ಕೆ ಕಾಪು ತಹಶಿಲ್ದಾರ್ ಭೇಟಿ
(Padubidri) ಪಡುಬಿದ್ರಿ : ಹೆಜಮಾಡಿ ಮತ್ತು ಕಾಪುವಿನಲ್ಲಿ ಕಡಲ್ಕೊರೆತ ಪ್ರಾರಂಭಗೊಂಡಿದ್ದು, ಕಡಲ ದಂಗೆ ಹಾಕಲಾದ ಬೃಹತ್ ಕಲ್ಲುಗಳು ಸಮುದ್ರ ಪಾಲಾಗಿದೆ.
ಹೆಜಮಾಡಿಯ ಮಾರುತಿ ರಸ್ತೆಯ ಬದಿಯಲ್ಲಿ ತಡೆಗೋಡೆಗೆ ಹಾಕಿದ್ದ ಕಲ್ಲುಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸ್ಥಳಕ್ಕೆ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು.
ಕಡಲಿನಿಂದ 30 ಮೀಟರ್ ದೂರದಲ್ಲಿ ಅಪಾಯದಲ್ಲಿದ್ದ ಆನಂದ ಎಂಬವರ ಕುಟುಂಬವನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಗ್ರಾಮಾಡಳಿತಾಧಿಕಾರಿಯವರಿಗೆ ತಹಶಿಲ್ದಾರ್ ಸೂಚಿಸಿದರು.
ತಡೆಗೋಡೆ ನಿರ್ಮಿಸಲು ಮತ್ತು ಜಾರುತ್ತಿರುವ ಬ್ರೇಕ್ ವಾಟರ್ ಕಲ್ಲುಗಳನ್ನು ವ್ಯವಸ್ಥಿತಗೊಳಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರಿಗೆ ಸೂಚನೆ ನೀಡಲಾಗಿದೆ.
ಇಲ್ಲಿನ ನಿವಾಸಿಗಳಿಗೆ ಕಡಲ್ಕೊರೆತದ ಪರಿಸ್ಥಿತಿಯ ಕುರಿತು ತಿಳುವಳಿಕೆ ನೀಡಲಾಗಿದೆ. ಕಡಲ್ಕೊರೆತ ಎದುರಿಸಲು ಸಮರ್ಥನೀಯ ಕ್ರಮವಾಗಿ ಜೈವಿಕ ತಡೆಗೋಡೆಯಾಗಿ ಜೈವಿಕ ರಕ್ಷಾಕವಚವನ್ನು ನಿರ್ಮಿಸಬಹುದಾಗಿದೆ. ಈ ಕ್ರಮದ ಕುರಿತು ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಹಶಿಲ್ದಾರ್ ಪ್ರತಿಭಾ ತಿಳಿಸಿದ್ದಾರೆ.
ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿದೆ.
ಕಾಪು ಪಡು ಮೂಳೂರು ತೊಟ್ಟಂ ಮತ್ತು ಮೂಳೂರು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ನಡುವಿನ ಸುಮಾರು ಒಂದು ಕಿ. ಮೀ. ಉದ್ದದ ಕರಾವಳಿ ತೀರದ ಎರಡು ಮೂರು ಕಡೆಗಳಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ. ಬೃಹತ್ ಅಲೆಗಳು ದಡಕ್ಕೆ ಮತ್ತು ತಡೆಗೋಡೆಗೆ ಅಪ್ಪಳಿಸುತ್ತಿದ್ದು ಈ ಪ್ರದೇಶಗಳಲ್ಲಿ ಹಿಂದೆ ನಿರ್ಮಿಸಿರುವ ತಡೆಗೋಡೆ, ಕಡಲು ವಿಸ್ತಾರಗೊಳ್ಳದಂತೆ ಅಡ್ಡಲಾಗಿ ಜೋಡಿಸಿರುವ ಕಲ್ಲುಗಳನ್ನು ಆಹುತಿ ಪಡೆಯುತ್ತಾ ಮುನ್ನುಗ್ಗಿ ಸಾಗಿಬರುತ್ತಿದೆ.
ಬೃಹತ್ ಅಲೆಗಳ ಕಾರಣದಿಂದಾಗಿ ಫಿಷರೀಸ್ ರಸ್ತೆಯಿಂದ ಪಡುಭಾಗದಲ್ಲಿರುವ ವೆಂಕು ಬಾಯಿ, ಅಪ್ಪಿ ಮರಕಾಲ್ತಿ, ತಾರಾವತಿ ಶ್ರೀಯಾನ್, ಶಾರದಾ ಕೋಟ್ಯಾನ್, ಸಂತೋಷ್ ಕುಮಾರ್, ಸುಮತಿ ಕಾಂಚನ್ ಎಂಬವರಿಗೆ ಸೇರಿದ ಮನೆ, ತೋಟ ಮತ್ತು ಖಾಲಿ ಜಾಗವು ತೀರಾ ಅಪಾಯದಲ್ಲಿವೆ. ಹತ್ತಾರು ತೆಂಗಿನಮರಗಳು ಸಮುದ್ರದ ಒಡಲು ಸೇರಲು ಸಿದ್ಧವಾಗಿರುವಂತೆ ಕಾಣುತ್ತಿದೆ.
ಆದಷ್ಟು ಶೀಘ್ರವಾಗಿ ಸಮುದ್ರ ತಡೆ ಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದರು.
ಈ ಸಂದರ್ಭ ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬೀರ್, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಪಂಚಾಯತ್ ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ಪಾಂಡುರಂಗ ಕರ್ಕೇರಾ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

