ಹೆಜಮಾಡಿ ; ಮಹತ್ವಾಕಾಂಕ್ಷೆಯ ಹೆಜಮಾಡಿ ಸರ್ವಋತು ಮೀನುಗಾರಿಕಾ ಬಂದರಿನ ಬ್ರೇಕ್‌ವಾಟರ್ ತೆರೆಯಲಾಗಿದೆ.
ಸುಮಾರು ರೂ.೧೮೦ ಕೋಟಿ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಯೋಜನೆಯಾದ ಹೆಜಮಾಡಿ ಬಂದರಿನ ಕಾಮಗಾರಿ ನಿಗದಿಗಿಂತ ಮುನ್ನ ಮುಗಿಸುವ ಹಂತದಲ್ಲಿತ್ತು. ಗುತ್ತಿಗೆ ಕಂಪನಿ ತಮಿಳುನಾಡಿನ ಶ್ರೀಪತಿ ಅಸೋಸಿಯೇಟ್ಸ್ ಅತೀ ವೇಗವಾಗಿ ಕಾಮಗಾರಿ ನಿರ್ವಹಿಸಿದ್ದು, ಕೊನೇ ಕ್ಷಣದಲ್ಲಿ ಅನುದಾನ ಬಿಡುಗಡೆ ವಿಳಂಬದಿಂದ ಕಾಮಗಾರಿ ನಿಧಾನವಾಗಿ ಸಾಗಿತ್ತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳು ಬಂದರು ಪ್ರದೇಶಕ್ಕೆ ಭೇಟಿ ನೀಡಿ ಅನುದಾನ ಬಿಡುಗಡೆಯ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ವಾರದೊಳಗೆ ಬ್ರೇಕ್‌ವಾಟರ್ ಓಪನ್ ಮಾಡುವುದಾಗಿ ಗುತ್ತಿಗೆ ಕಂಪನಿ ಭರವಸೆ ನೀಡಿತ್ತು. ಅದರಂತೆ ಬ್ರೇಕ್‌ವಾಟರ್ ಓಪನ್ ಮಾಡಲಾಗಿದ್ದು, ಶಾಂಭವಿ ಮತ್ತು ನಂದಿನಿ ಹೊಳೆ ನೀರು ನೂತನ ಬ್ರೇಕ್‌ವಾಟರ್ ಮೂಲಕ ಸಮದ್ರ ಸೇರಲು ಆರಂಭಿಸಿದೆ.
ಕಸ ಕಡ್ಡಿ ಅಡ್ಡಿ: ಸುಮಾರು ೧೨೦ ಮೀಟರ್ ಅಗಲದ ಬ್ರೇಕ್‌ವಾಟರ್ ತೆರವಿನ ಸಂದರ್ಭ ಬ್ರೇಕ್‌ವಾಟರ್‌ನ ಉತ್ತರ ಭಾಗದಲ್ಲಿ ಸುಮಾರು ೪೦ ಮೀಟರ್‌ನಷ್ಟು ಮಾತ್ರ ಓಪನ್ ಮಾಡಲಾಗಿತ್ತು. ಕಳೆದೆರಡು ದಿನಗಳಿಂದ ಹೆಚ್ಚು ಮಳೆಯಾದ ಕಾರಣ ಬ್ರೇಕ್‌ವಾಟರ್ ಮೂಲಕ ನೀರು ಹರಿವಿಗೆ ಬೃಹತ್ ಕಸಕಡ್ಡಿಗಳು ಅಡ್ಡಿಯಾಗಿತ್ತು. ಈ ಸಂದರ್ಭ ಗುತ್ತಿಗೆ ಕಂಪನಿ ಹರಸಾಹಸಪಟ್ಟು ಕಸ ತೆರವುಗೊಳಿಸಿದ ಬಳಿಕ ನೀರ ಹರಿವು ಸರಾಗವಾಗಿದೆ.
ನೆರೆ ಬಂದಲ್ಲಿ ಬ್ರೇಕ್‌ವಾಟರ್‌ನ ೧೨೦ ಮೀಟರ್ ಅಗಲದಲ್ಲಿ ಸ್ವಯಂಚಾಲಿತವಾಗಿ ಓಪನ್ ಆಗಲಿದೆ. ಆದರೆ ಈ ಸಂದರ್ಭ ಬೃಹತ್ ಗಾತ್ರದಲ್ಲಿ ಅಲ್ಲಿರುವ ಮರಳು ಸಮುದ್ರ ಸೇರಲಿದೆ. ಮುಂದೆ ಇದು ಹಲವು ತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗಲಿದೆ.
ಎರಡು ಅಳಿವೆ: ಇದೇ ಪ್ರಥಮ ಬಾರಿಗೆ ಶಾಂಭವಿ-ನಂದಿನಿ ಹೊಳೆ ನೀರು ಎರಡು ಅಳಿವೆಗಳ ಮೂಲಕ ಸಮುದ್ರ ಸೇರುತ್ತಿದೆ. ಸ್ವಾಭಾವಿಕ ಅಳಿವೆಯನ್ನು ಮುಚ್ಚುವ ಯತ್ನವಾಗಿ ಅಳಿವೆಯ ಎರಡೂ ಭಾಗಗಳಿಂದ ಕಲ್ಲುಗಳನ್ನು ಹಾಕುತ್ತಾ ಬರಲಾಗಿತ್ತು. ಇದೀಗ ಸ್ವಾಭಾವಿಕ ಅಳಿವೆಯ ಮುಚ್ಚುವ ಕಾರ್ಯವನ್ನು ಮಳೆಗಾಲ ಮುಗಿಯುವವರೆಗೆ ಮುಂದೂಡಲಾಗಿದೆ. ಹಾಗಾಗಿ ಹೊಳೆ ನೀರು ಎರಡು ಅಳಿವೆಗಳ ಮೂಲಕ ಸಮುದ್ರ ಸೇರುತ್ತಿದೆ.
ಜೆಟ್ಟಿ ಕಾರ್ಯ ಆರಂಭ: ಬ್ರೇಕ್‌ವಾಟರ್ ಕಾಮಗಾರಿ ನಿರ್ವಹಣೆಯೊಂದಿಗೆ ಶ್ರೀಪತಿ ಎಸೋಸಿಯೇಟ್ಸ್ ಜೆಟ್ಟಿ ನಿರ್ಮಾಣ ಕಾಮಗಾರಿಗೂ ಮುಂದಡಿ ಇಟ್ಟಿದೆ. ಬ್ರೇಕ್‌ವಾಟರ್‌ನ ಉತ್ತರ ಭಾಗದಲ್ಲಿ ಎರಡು ಜೆಟ್ಟಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

