ಹೆಜಮಾಡಿ: 1951ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ
ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪರಿಣಾಮಕಾರಿ : ಪಡುಬಿದ್ರಿ ಬೀಡು ಕಿನ್ಯಕ್ಕ ಬಲ್ಲಾಳ್
(Hejamady) ಹೆಜಮಾಡಿ: ಯುವ ಜನಾಂಗವನ್ನು ಅಧಃಪತನಕ್ಕೆ ತಳ್ಳುವ, ದುಡಿಮೆಯ ಹಣವನ್ನು ಪೋಲು ಮಾಡುವ, ಕೌಟುಂಬಿಕ ಜೀವನವನ್ನು ಹಾಳು ಗೆಡಹುವ ಕುಡಿತ ಸಮಾಜಕ್ಕೆ ಮಾರಕವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ದೂರದೃಷ್ಟಿತ್ವದ ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪರಿಣಾಮಕಾರಿಯಾಗಲಿದೆ ಎಂದು ಪಡುಬಿದ್ರಿ ಬೀಡು ಕಿನ್ಯಕ್ಕ ಬಲ್ಲಾಳ್ ರತ್ನಾಕರ ರಾಜ್ ಅರಸ್ ಹೇಳಿದರು.
ಅವರು ಬುಧವಾರ ಹೆಜಮಾಡಿ ಶ್ರೀ ನಾರಾಯಣಗುರು ಬಿಲ್ಲವರ ಸಂಘದ ಸಭಾಂಗಣದಲ್ಲಿ ಕಾಪು ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ 1951ನೇ ಮದ್ಯವರ್ಜನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಶಿಬಿರದಿಂದ ಮದ್ಯ ವ್ಯಸನಿಗಳು ಶ್ರೀ ಧರ್ಮಸ್ಥಳ ಮಂಜುನಾಥನ ಅನುಗ್ರಹದಿಂದ ಮದ್ಯ ವ್ಯಸನದಿಂದ ಮುಕ್ತರಾಗಿ ಕೌಟುಂಬಿಕವಾಗಿ ವೈಯಕ್ತಿಕವಾಗಿ ಆರೋಗ್ಯವಂತರಾಗಿರಿ ಎಂದರು.
1951ನೇ ಮದ್ಯವರ್ಜನ ಶಿಬಿರ ರಾಜ್ಯಕ್ಕೆ ದೊಡ್ಡ ಹೆಜ್ಜೆ:
ಮುಖ್ಯ ಅತಿಥಿಯಾಗಿದ್ದ ಕಾಪು ತಾಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಮಾತನಾಡಿ, ಕುಡಿತ ಸಮಾಜದ ಪಿಡುಗು. ಕುಡಿತದಿಂದ ಕೌಟುಂಬಿಕ ಸುರಕ್ಷತೆ ಇಲ್ಲವಾಗುತ್ತದೆ. ಆರ್ಥಿಕವಾಗಿ ದಿವಾಳಿಯಂಚಿಗೆ ಸಾಗುವಂತಾಗುತ್ತದೆ. ಕುಟುಂಬವೂ ಛಿದ್ರ ಛಿದ್ರವಾಗುತ್ತದೆ. ಆ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ವ್ಯಸನ ಮುಕ್ತತೆಯಿಂದ ವ್ಯಕ್ತಿಯು ನವಜೀವನಕ್ಕೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಇದೊಂದು ಬದುಕಿನ ಸದವಕಾಶವಾಗಿದ್ದು, ಮನ ಪರಿವರ್ತನೆಯಿಂದ ವ್ಯಸನ ಮುಕ್ತರಾಗಲು ಸಾಧ್ಯವಾಗಲಿರುವ ಪರಿಣಾಮಕಾರಿಯಾದ 1951ನೇ ಮದ್ಯ ವರ್ಜನ ಶಿಬಿರವು ಕರ್ನಾಟಕ ರಾಜ್ಯಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು.
ಸುಸಂಸ್ಕೃತ ಜೀವನ ಮುನ್ನಡೆಸಲು ಸಾಮೂಹಿಕ ಸೇವೆ:
ಜನಜಾಗೃತಿಯ ಮೂಲಕ ಸಮಾಜದ ಪರಿವರ್ತನೆಗೆ ಸಾಮೂಹಿಕ ಸೇವೆಯಾಗಿ 1951ನೇ ಮದ್ಯವರ್ಜನ ಶಿಬಿರವು ಸಹಕಾರಿಯಾಗಿದೆ. ಮದ್ಯದ ಆದಾಯ ಸರಕಾರಕ್ಕೆ ಗಣವೀಯವಾಗಿದ್ದು, ಸರಕಾರವು ಮದ್ಯವನ್ನು ಬಂದ್ ಮಾಡುವುದಿಲ್ಲ. ಸುಸಂಸ್ಕೃತ ಜೀವನವನ್ನು ಮುನ್ನಡೆಸಲು ಇಂತಹ ಮದ್ಯವರ್ಜನ ಶಿಬಿರವು ಸಹಕಾರಿಯಾಗಿದ್ದು, ವೀರೇಂದ್ರ ಹೆಗ್ಗಡೆ ಅವರ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಕಲ್ಯಾಣದ ಹಲವು ಯೋಜನೆಗಳನ್ನು ಮೆಚ್ಚಿದ ಕೇಂದ್ರದ ರಾಹುಲ್ ಗಾಂಧಿ ಅವರೂ ಕೂಡಾ ಅಧ್ಯಯನದ ಅನುಷ್ಠಾನಕ್ಕೆ ಮುಂದಾಗಿದ್ದು, ಜನಪರ ಯೋಜನೆಗಳ ಹೆಮ್ಮೆಯಾಗಿದೆ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ವ್ಯಸನ ಮುಕ್ತ ಸಮಾಜ ನಿರ್ಮಿಸುವ ಜತೆಗೆ ಸುಶಿಕ್ಷಿತ, ಸುರಕ್ಷಿತ, ಸುವ್ಯವಸ್ಥಿತ ಕುಟುಂಬಕ್ಕೆ ಆಧಾರವಾಗಲು ಸಾಧ್ಯ ಎಂದರು.
ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವರಾಮ ಎನ್. ಶೆಟ್ಟಿ, ಕಾಪು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ದಯಾನಂದ ಹೆಜಮಾಡಿ, ಉಡುಪಿ ಜಿಲ್ಲೆ ಜನಜಾಗೃತಿ ವೇದಿಕೆ ಸದಸ್ಯ ಉದಯ ಕುಮಾರ್ ಶೆಟ್ಟಿ ಇನ್ನಾ, ಕಟಪಾಡಿ ಜನಜಾಗೃತಿ ವೇದಿಕೆ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದ ಅಧ್ಯಕ್ಷ ಎಸ್. ದಿವಾಕರ ಹೆಜಮಾಡಿ, ಜೈ ಕರ್ನಾಟಕ ಯುವಕ ಯುವತಿ ಮಂಡಳಿಯ ಪ್ರಬೋದ್ಚಂದ್ರ ಹೆಜಮಾಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಧಾಕರ ಕರ್ಕೇರ, ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ ಆಚಾರ್ಯ, ಹೆಜಮಾಡಿ ಒಕ್ಕೂಗಳ ಅಧ್ಯಕ್ಷರಾದ ಗಣೇಶ್ ಆಚಾರ್ಯ, ಆಶಾ ಪ್ರಾಣೇಶ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಗೌರವ ಸಲಹೆಗಾರ ಮೋಹನ್ ಸುವರ್ಣ, ಗೀತಾ ವಾಗ್ಳೆ, ಸುದರ್ಶನ್ ರಾವ್ ಕುಂಜಾರುಗಿರಿ ಇದ್ದರು.
ಶಶಿರೇಖಾ ಪ್ರಾರ್ಥಿಸಿದರು. ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಸ್ವಾಗತಿಸಿದರು. ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಸ್ತಾವನೆಗೈದರು. ಶಿರ್ವ ವಲಯ ಮೇಲ್ವಿಚಾರಕಿ ಗೀತಾ ಎನ್. ವಂದಿಸಿದರು. ಶಿಬಿರಾಧಿಕಾರಿ ವಿದ್ಯಾಧರ್ ನಿರೂಪಿಸಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಾಪು ತಾಲೂಕು ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಾಪು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ದೇರಳಕಟ್ಟೆ(ಕ್ಷೇಮ), ನವಜೀವನ ಸಮಿತಿ ಕಾಪು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಾಪು, ಸ್ಥಳೀಯ ಸಂಘ ಸಂಸ್ಥೆಗಳು, ಬಿಲ್ಲವರ ಸಂಘ ಹೆಜಮಾಡಿ, ಹೆಜಮಾಡಿ ಗ್ರಾ.ಪಂ., ಪಡುಬಿದ್ರಿ ಆರಕ್ಷಕ ಠಾಣೆ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ, ಕರಾವಳಿ ಯುವಕ ಯುವತಿ ವೃಂದ, ಜೈ ಕರ್ನಾಟಕ ಯುವ ಸಂಸ್ಥೆ, ಯುವತಿ ಮಹಿಳಾ ಮಂಡಳ ಹೆಜಮಾಡಿ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯ್ಲಾ-ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1951ನೇ ಮದ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿತ್ತು.

