ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರ: ಹೊಸ ಹೆಲ್ಮೆಟ್ ವಿತರಿಸಿದ ಪಡುಬಿದ್ರಿ ಪೊಲೀಸರು
(Padubidri) ಪಡುಬಿದ್ರಿ: ಪಡುಬಿದ್ರಿ ಪೇಟೆಯಲ್ಲಿ 36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಕಾರ್ಯಕ್ರಮದ ಸಂದರ್ಭ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನರವರು, ಹೆಲ್ಮೆಟ್ ಧರಿಸದ ಸವಾರನಿಗೆ ಹೊಸ ಹೆಲ್ಮೆಟ್ ವಿತರಿಸುವ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದರು.
ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ಪೊಲೀಸ್ ಠಾಣೆ, ಪಡುಬಿದ್ರಿ ಲಯನ್ಸ್ ಕ್ಲಬ್, ಇನ್ನರ್ವೀಲ್ ಕ್ಲಬ್, ರೋಟರ್ಯಾಕ್ಟ್ ಕ್ಲಬ್, ಕರ್ನಾಟಕ ಪಬ್ಲಿಕ್ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ ಪೇಟೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ಮಾಹಿತಿ ನೀಡಲಾಯಿತು.
ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಿಂದ ಪಡುಬಿದ್ರಿ ಪೇಟೆ, ಮಾರ್ಕೆಟ್ ರಸ್ತೆಯ ಮೂಲಕ ಜಾಗೃತಿ ಜಾಥಾದಲ್ಲಿ ಪಡುಬಿದ್ರಿ ಪೇಟೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಬಳಕೆಯ ಬಗ್ಗೆ ಪಡುಬಿದ್ರಿ ಎಸ್ಐ ಪ್ರಸನ್ನ ಅವರು ಮಾಹಿತಿ ನೀಡಿದರು.
ಇದೇ ವೇಳೆ ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸುತಿದ್ದ ಸವಾರನನ್ನು ನಿಲ್ಲಿಸಿ ಅವನಿಗೆ ಹೊಸ ಹೆಲ್ಮಟ್ ವಿತರಿಸಿ ಇನ್ನು ಮುಂದೆ ಹೆಲ್ಮೆಟ್ ಧರಿಸುವಂತೆ ಹಾಗೂ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ತಸ್ನೀನ್ ಆರ್ಹಾ, ಪೂರ್ವಾಧ್ಯಕ್ಷರುಗಳಾದ ರಮೀಝ್ ಹುಸೈನ್, ಗಣೇಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಪಿ. ಬಂಗೇರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಅವಿನಾಶ್, ಸ್ನೇಹಾ, ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಗೀತಾ ಶೆಟ್ಟಿ, ಪ್ರಾಥಮಿಕ ವಿಭಾಗದ ಜಾನೆಟ್ ಕ್ಲಾರಾ, ರೋಟರಿ ಕ್ಲಬ್ನ ಜ್ಯೋತಿ ಮೆನನ್, ಪುಷ್ಪಲತಾ, ಶೋಭಾ ಉಪಸ್ಥಿತರಿದ್ದರು.

