
15 ವರ್ಷದೊಳಗಿನವರ ಮುಕ್ತ, ಬಾಲಕಿಯರ ಫಿಡೆ ರೇಟೆಡ್ ರಾಜ್ಯ ಚೆಸ್ : ಆದಿತ್ಯ ಮತ್ತು ಆರುಷಿ ಮುಡಿಗೆ ಪ್ರಶಸ್ತಿ
(Kaup) ಕಾಪು: ಬೆಂಗಳೂರಿನ ಆದಿತ್ಯ ರಂಜನ್ ಸಾಹು ಮತ್ತು ಮಂಗಳೂರಿನ ಆರುಷಿ ಸೆವೆರಿನ್ ಹಲೆನ್ ಡಿಸಿಲ್ಲ ಅವರು ಇಲ್ಲಿನ ಕಾಪುವಿನಲ್ಲಿ ನಡೆದ 15 ವರ್ಷ ದೊಳಗಿನವರ ಫಿಡೆ ರೇಟೆಡ್ ರಾಜ್ಯ ಚೆಸ್ ಚಾಂಪಿಯನ್ ಷಿಪ್‌ನಲ್ಲಿ ಕ್ರಮವಾಗಿ ಮುಕ್ತ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಅಫ್ ಚೆಸ್ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಅದಿತ್ಯ ರಂಜನ್ 7.5 ಪಾಯಿಂಟ್ ಗಳಿಸಿದರೆ ಅರುಷಿ 8.5 ಪಾಯಿಂಟ್ ಕಲೆ ಹಾಕಿದರು. ಇಬ್ಬರೂ ತಲಾ 26 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.
ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಅಜಯ್ ಹಿಪ್ಪರಗಿ ಮತ್ತು ಯುವನೇಶ್ ಎ ಕೂಡ 7.5 ಪಾಯಿಂಟ್ ಗಳಿಸಿದ್ದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಆದಿತ್ಯ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಅಜಯ್ ಮತ್ತು ಯುವನೇಶ್ ಕ್ರಮವಾಗಿ 2 ಮತ್ತು 3ನೇ ಸ್ಥಾನದೊಂದಿಗೆ ₹ 4 ಸಾವಿರ ಮತ್ತು 3 ಸಾವಿರ ನಗದು ಪಡೆದುಕೊಂಡರು.
ಬೆಂಗಳೂರಿನ ವಿಹಾನ್ ಸಬ್‌ದೇವ್, ಮೈಸೂರಿನ ನಿವಾನ್ ರಾಘವೇಂದ್ರ, ಬೆಂಗಳೂರಿನ ಪ್ರಥಮೇಶ್ ಶಶಿಕಾಂತ್ ದೇಶ್‌ಮುಖ್, ಮೈಸೂರಿನ ಈಶ್ವರ್ ವೀರಪ್ಪನ್ನ ಆಯ್ಕೆಪ್ಪನ್, ದಕ್ಷಿಣ ಕನ್ನಡದ ಆರಾಧ ಭಟ್ಟಾಚಾರ್ಯ ಹಾಗೂ ಬೆಂಗಳೂರಿನ ಅದ್ರಿತ್ ದಾಸ್ ತಲಾ 7 ಪಾಯಿಂಟ್ ಗಳಿಸಿದರು. ಇವರು ಕ್ರಮವಾಗಿ 4ರಿಂದ 9ರ ವರೆಗಿನ ಸ್ಥಾನಕ್ಕೆ ಸಮಾಧಾನ ಪಟ್ಟು ಕೊಂಡರು.
ಬಾಲಕಿಯರ ವಿಭಾಗದಲ್ಲಿ ಆರುಷಿ 8.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ್ತಿ ಎನಿಸಿಕೊಂಡರು. ಉತ್ತರ ಕನ್ನಡದ ಅಕ್ಷಯ ಸಾಧಿ 7.5 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಅದರು. ಅವರಿಗೆ 4 ಸಾವಿರ ನಗದು ಲಭಿಸಿತು.
ಬೆಂಗಳೂರಿನ ಪ್ರತೀತಿ ಬೊರ್ಡೋಲಿ ಮತ್ತು ಶ್ರೇಯಾ ರಾಜೇಶ್ ತಲಾ 7 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಪ್ರತೀತಿ 3 ಮತ್ತು ಶ್ರೇಯಾ 4ನೇ ಸ್ಥಾನ ಗಳಿಸಿದರು. ಇವರಿಗೆ ಕ್ರಮವಾಗಿ ( 3 ಸಾವಿರ ಮತ್ತು ₹ 2.5 ಸಾವಿರ ನೀಡಲಾಯಿತು.
ಬೆಂಗಳೂರಿನ ಕೃಪಾ ಉಕ್ಕಲಿ, ಇಂದುಶೀತಲ, ಉತ್ತರ ಕನ್ನಡದ ಅನ್ವಿತಾ ಸಾಥಿ, ಬೆಂಗಳೂರಿನ ಧನುಷ್ಯಾ, ದಿವ್ಯಶ್ರೀ ಮತ್ತು ನ್ಯಾನ್ಸಿ ತಲಾ 6.5 ಪಾಯಿಂಟ್‌ಗಳೊಂದಿಗೆ ಕ್ರಮವಾಗಿ 5ರಿಂದ 10ರ ವರೆಗಿನ ಸ್ಥಾನ ಗಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು.
ಬಹುಮಾನ ವಿತರಕರಾಗಿ ಬ್ರಹ್ಮಾನಂದ ಭಟ್ ಕೆ.ಬಿ.ಬಿ ತರಕಾರಿ ವ್ಯಾಪಾರಸ್ತರು ಕಾಪು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಲಾಲಾಜಿ ಆರ್ ಮೆಂಡನ್, ನಾಗೇಶ ಕಾರಂತ್ ಪಾಂಗಳ, ಬಾಬು ಜೆ ಪೂಜಾರಿ, ಸುನಿಲ್ ಪೂಜಾರಿ ಎಸ್ ಬಿಐ ಕಾಪು, ಪತ್ರಕರ್ತ ರಾಕೇಶ್ ಕುಂಜೂರು, ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಅಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಉಪಸ್ಥಿತರಿದ್ದರು.
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಸ್ಥಾಪಕ ಸಾಕ್ಷಾತ್ ಯು ಕೆ ಸ್ವಾಗತಿಸಿದರು. ನಿರ್ದೇಶಕಿ ಸೌಂದರ್ಯ ಯು ಕೆ ವಂದಿಸಿದರು.

