ಅಮೃತ ವಿದ್ಯಾಲಯಂ ನಲ್ಲಿ ‘ಅಮೃತ ಸಂಸ್ಕೃತಿ ‘ ವೈಭವ
ಮಂಗಳೂರು: ಪುಟ್ಟ ಮಕ್ಕಳು ಬೆಳಕಿನ ಬುಗ್ಗೆಯಂತೆ. ಅವರು ನಮ್ಮ ಆಲೋಚನೆಗಳನ್ನೆಲ್ಲಾ ತುಂಬಿ ಬಿಡುವ ಪಾತ್ರೆಗಳಲ್ಲ. ಮಕ್ಕಳೆಂದರೆ ಪ್ರಜ್ವಲಿಸುವ ದೀಪವಿದ್ದಂತೆ. ನಾವು ಬೆಳಕು ನೀಡಿ ಸಲಹಬೇಕು ಎಂದು ಮಂಗಳೂರು ಮಾತಾ ಅಮೃತಾನಂದಮಯಿ ಮಠಾಧಿಪತಿ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು.
ಬೋಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನಡೆದ ನರ್ಸರಿ ವಿಭಾಗದ ‘ಅಮೃತ ಸಂಸ್ಕೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶಾಲಾ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ ಮಾತನಾಡಿ, ಪುಟ್ಟ ಮಕ್ಕಳಿಗೆ ಅನೇಕ ಅವಕಾಶಗಳನ್ನು, ವೇದಿಕೆಗಳನ್ನು ಸೃಷ್ಟಿ ಮಾಡಬೇಕು. ಸಾಧ್ಯವಾದಷ್ಟು ಮಕ್ಕಳಿಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಹೆತ್ತವರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭ ಅಭಿಪ್ರಾಯಗಳನ್ನು ಹಂಚಿಕೊಂಡ ಶಾಲಾ ವಿದ್ಯಾರ್ಥಿಗಳ ಹೆತ್ತವರು, ಜಾಗತಿಕ ಮಟ್ಟದ ಶಿಕ್ಷಣದ ಜೊತೆಗೆ ನೈತಿಕತೆ, ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಲಿಸಿಕೊಡುವ ಇಂತಹ ಶಿಕ್ಷಣ ಸಂಸ್ಥೆಗಳು ಪುಟ್ಟ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಗ್ರಮಾನ್ಯ ಎಂದು ಹೇಳಿದರು.
ಬಳಿಕ ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.
ಶಾಲಾ ಪ್ರಾಂಶುಪಾಲೆ ಅಕ್ಷತಾ ಶೆಣೈ ವಂದಿಸಿದರು . ಯು ಕೆ ಜಿ ವಿಭಾಗದ ಪುಟಾಣಿಗಳು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ಶಿಕ್ಷಕೇತರ ವೃಂದದವರು , ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

