ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪುರಿಯ ಮಹೇಶ್ವರಾನಂದ ಸ್ವಾಮೀಜಿ ಭೇಟಿ, ದೇವರ ದರ್ಶನ
(Udupi) ಉಡುಪಿ: ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣ ಮಠಕ್ಕೆ ಮಹೇಶ್ವರಾನಂದ ಸ್ವಾಮೀಜಿ ತಮ್ಮ ಶಿಷ್ಯ ಶ್ರೀಅವತಾರ ಪುರಿ ಸ್ವಾಮೀಜಿ ಯವರ ಜೊತೆಗೆ ಆಗಮಿಸಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದರು.
ಮಹೇಶ್ವರಾನಂದ ಸ್ವಾಮೀಜಿಯವರು ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತ ದೇಶ ವಿದೇಶಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುತ್ತಾರೆ.ಇವರಿಂದ ಭಾರತದ ಜೋಧಪುರದಲ್ಲಿ ಓಂಕಾರದ ಮಾದರಿಯಲ್ಲಿಯೇ ಅತ್ಯಾಕರ್ಷಕವಾಗಿ ಬೃಹತ್ ಮಂದಿರ ನಿರ್ಮಾಣ ಗೊಂಡಿರುವುದನ್ನು ಸ್ಮರಿಸಬಹುದು.
ಪುತ್ತಿಗೆ ಶ್ರೀಪಾದರು ಜಾಗತಿಕ ಶಾಂತಿ ಸಮ್ಮೇಳನದ ಸಭೆಯಲ್ಲಿ ಯುರೋಪಿನ ವಿಯೆನ್ನಾ ದೇಶಕ್ಕೆ ತೆರಳಿದಾಗ ಇವರ ಆಶ್ರಮದಲ್ಲಿಯೇ ತಂಗಿದ್ದನ್ನು ಪೂಜ್ಯರು ನೆನಪಿಸಿಕೊಂಡರು.
ಶ್ರೀಕೃಷ್ಣ ದರ್ಶನದ ಬಳಿಕ ಗೀತಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಪೂಜ್ಯರ ಕೋಟಿ ಗೀತಾ ಲೇಖನ ಯಜ್ಞದ ಆಂದೋಲನ ಕಾರ್ಯಕ್ರಮವನ್ನು ವಿಶೇಷವಾಗಿ ಮೆಚ್ಚಿಕೊಂಡರು.
ಉಭಯ ಶ್ರೀಪಾದರಿಗೂ ಮಠದ ವತಿಯಿಂದ ಶಾಲು ಹೊದಿಸಿ ಭಗವದ್ಗೀತಾ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.

