ಹೆಜಮಾಡಿ ಟೋಲ್ಗೇಟ್: ವ್ಯಾಪಾರ ನಡೆಸದ ಗೂಡಂಗಡಿಗಳ ತೆರವು
(Padubidri) ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ, ವ್ಯಾಪಾರ ನಡೆಸದೆ ಇರುವ ಚಪ್ಪರಗಳನ್ನು ಸೋಮವಾರ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸಲಾಯಿತು.
ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಚಪ್ಪರಗಳನ್ನು ನಿರ್ಮಿಸಿ ಹೆಚ್ಚಿನ ಮೊತ್ತವನ್ನು ಪಡೆದು ಪರಭಾರೆ ಮಾಡಿ ಬಾಡಿಗೆ ಪಡೆಯುತ್ತಿರುವುದರ ಬಗ್ಗೆ ಹಲವು ಸಮಯಗಳಿಂದ ದೂರುಗಳು ಕೇಳಿಬರುತಿತ್ತು. ಕಳೆದ ವಾರವೇ ಎಲ್ಲಾ ಅನಧಿಕೃತವಾಗಿ ನಿರ್ಮಿಸಿರುವ ಗೂಡಂಗಡಿಗಳಿಗೂ ನೋಟೀಸು ನೀಡಿ ತೆರವುಗೊಳಿಸುವಂತೆ ತಾಕೀತು ಮಾಡಲಾಗಿತ್ತು. ಆದರೆ ಮೊದಲ ಹಂತದಲ್ಲಿ ವ್ಯಾಪಾರ ವಹಿವಾಟುಗಳು ನಡೆಯದಿರುವ ಎಂಟು ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.
ಕಾರ್ಯಾಚರಣೆಯ ವೇಳೆ ಕೆಲವು ಗೂಡಂಗಡಿಗಳಲ್ಲಿ ಅನೈತಿಕ ಚಟುವಟಿಕೆ ಹಾಗೂ ಡ್ರಗ್ಸ್ ಮಾರಾಟ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿಬಂತು. ಈ ವೇಳೆ ಪಿಎಸ್‌ಐ ಪ್ರಸನ್ನ ಅನೈತಿಕ ಚಟುವಟಿಕೆ ನಡೆಸುವ ಬಗ್ಗೆ ದೂರುಗಳು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರಕಾರಿ ಜಾಗವನ್ನು ಮಾರಿದವರ ವಿರುದ್ಧ ಮತ್ತು ಇತರರಿಂದ ಬಾಡಿಗೆ ಪಡೆದುಕೊಳ್ಳುವವರ ವಿರುದ್ಧ ಇಲಾಖೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ಹೆದ್ದಾರಿ ಪ್ರದೇಶದಲ್ಲಿ ಟೇಬಲ್‌ಗಳನ್ನು ಇರಿಸಿ ವ್ಯಾಪಾರವನ್ನು ಮಾಡುವಂತಿಲ್ಲ. ಅನಧಿಕೃತ ಚಟುವಟಿಕೆಗಳನ್ನು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಸಾರ್ವಜನಿಕ ಸ್ಥಳವಾದ್ದರಿಂದ ಇಲ್ಲಿ ಸಿಗರೇಟೂ ಸೇದುವಂತಿಲ್ಲ.
ರಾತ್ರಿ ೧೨ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ. ಆ ಬಳಿಕ ಯಾವುದೇ ಅಂಗಡಿಗಳು ತೆರೆದಿದ್ದಲ್ಲಿ ಅವುಗಳ ವಿರುದ್ಧ ಕೂನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದೂ ಹೆಜಮಾಡಿ ಟೋಲ್‌ಗೇಟ್‌ನಲ್ಲಿನ ಗೂಡಂಗಡಿಗಳ ವ್ಯಾಪಾರಿಗಳನ್ನು ಪಿಎಸ್‌ಐ ಪ್ರಸನ್ನ ಕರೆದು ತಿಳಿಹೇಳಿ ಎಚ್ಚರಿಸಿದ್ದಾರೆ.
ಹೆಜಮಾಡಿಯ ಕೆಕೆಆರ್ ಟೋಲ್‌ಗೇಟ್ ಪ್ರಬಂಧಕ ತಿಮ್ಮಯ್ಯ ಹಾಗೂ ಟೋಲ್ ಸಿಬ್ಬಂದಿ ಉಪಸ್ಥಿತರಿದ್ದರು.

