ಉದ್ಯಾವರ ಪಡುಕರೆ : ಕಡಲ ಅಬ್ಬರದ ಹೆದ್ದೆರೆಗಳಿಗೆ ಕಲ್ಲಿನ ತಡೆಗೋಡೆ
ಕಡಲ ತಡಿಯ ನಿವಾಸಿಗಳಿಂದ ನೆಮ್ಮದಿಯ ನಿಟ್ಟುಸಿರು
(ಕೃಪೆ: ವಿಜ್ಜು, ಉಚ್ಚಿಲ)
(Udyavara) ಉದ್ಯಾವರ: ಉದ್ಯಾವರ ಪಡುಕರೆ ಕಡಲ ತಟದ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರಾಣಾತಂಕವನ್ನು ಒಡ್ಡುತ್ತಾ, ಮನೆಯನ್ನೇ ಕೆಡವಲು ರಸ್ತೆಯನ್ನೇ ಆಪೋಷಣೆಗೈದು ರೋಶಾವೇಷದಿಂದ ಮುನ್ನುಗ್ಗಿ ಬರುತ್ತಿದ್ದ ಕಡಲ ಅಬ್ಬರದ ಹೆದ್ದೆರೆಗಳು ಅದೆಷ್ಟೋ ದಿನಗಳನ್ನು ಕಡಲ ತಡಿಯ ನಿವಾಸಿಗಳನ್ನು ನಿದ್ರೆ ಇಲ್ಲದೆ ಕಳೆಯುವಂತೆ ಮಾಡಿತ್ತು. ಮನೆ ಬಿಟ್ಟು ಶಾಲೆಯಲ್ಲಿ ಆಶ್ರಯ ಪಡೆಯುವಂತೆ ಮಾಡಿತ್ತು. ದಿನನಿತ್ಯ ಆತಂಕ ಮಡುಗಟ್ಟಿತ್ತು.
ಮೊದಲು ಮಳೆಗಾಲ ಬಂತೆಂದರೆ ಹುಟ್ಟಿನಿಂದಲೇ ಕಡಲ ತಡಿಯ ಕಸುಬು ಮೂಲಕ ಬದುಕು ಕಟ್ಟಿಕೊಟ್ಟ ಮನೆಯನ್ನು ಬಿಟ್ಟು ತೆರಳಲು ಅಥವಾ ಬೇರೆಡೆ ಮನೆಯನ್ನು ಕಟ್ಟಲು ಅಸಹಾಯಕರಾಗಿದ್ದು, ಮಕ್ಕಳು ಮರಿಗಳೊಂದಿಗೆ ಆತಂಕದ ದಿನಗಳನ್ನು ಎದುರಿಸುವಂತಾಗಿತ್ತು. ಉದ್ಯಾವರ ಗ್ರಾ.ಪಂ. ದುಸ್ಥಿತಿಯನ್ನು ಕಂಡು ಸಿಮೆಂಟ್ ದಂಡೆಯನ್ನೇ ನಿರ್ಮಿಸಿ ಮನೆಗೆ ರಕ್ಷಣೆಯನ್ನು ಕೊಟ್ಟಿದೆ.
ಮನೆಗಳ ಪಶ್ಚಿಮ ಭಾಗದಲ್ಲಿ ಕಡಲ ಸೆರೆಗಳ ಅಬ್ಬರದ ರುದ್ರನರ್ತನ. ಬಿರುಸಿನಿಂದ ಕೂಡಿದ ಅಲೆಗಳು ತೆಂಗಿನ ಮರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ರಭಸವಾಗಿ ಮನೆಗೆ ಅಪ್ಪಳಿಸಿ ಪೂರ್ವಭಾಗದಲ್ಲಿ ಹರಿಯುತ್ತಿರುವ ಪಾಪನಾಶಿನಿ ಹೊಳೆಯನ್ನು ಸೇರುತ್ತಿತ್ತು. ಮತ್ತೊಂದೆಡೆ ಅದೇ ಪಾಪನಾಶಿನಿ ಹೊಳೆಯ ನೀರು ಉಕ್ಕೇರಿ ಹರಿದು ನದಿ ದಂಡೆ ಕೊರೆತದ ಮೂಲಕ ಜಮೀನಿನಲ್ಲಿದ್ದ ತೆಂಗಿನ ಮರಗಳನ್ನು ಲೂಟಿ ಹೊಡೆದು ಕಬಳಿಸುತ್ತಿತ್ತು. ಅಂತಹ ಭಯಾನಕ ಸನ್ನಿವೇಶವನ್ನು ಎದುರಿಸಿ ದಿನ ಕಳೆಯುತ್ತಿದ್ದ ಕರಾಳ ದಿನಗಳು ಕಣ್ಣ ಮುಂದೆ ಹಾದು ಹೋಗುತ್ತಿದೆ ಎಂದು ಕಡಲ ತಡಿಯ ನಿವಾಸಿಗಳು ಇದೀಗ ನಿಟ್ಟುಸಿರು ಬಿಟ್ಟು ಹೇಳುತ್ತಿದ್ದಾರೆ.
ಇದೀಗ ರಕ್ಷಣೆಗೆ ನಿಂತ ೯೧.೦೯ ಕೋಟಿ ರೂ.ನಲ್ಲಿ ಎಡಿಬಿ ಪೈಲಟ್ ಪ್ರಾಜೆಕ್ಟ್ :
ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಡುಕರೆ ಭಾಗದ ಪ್ರದೇಶದಲ್ಲಿ ಸುಮಾರು ೫ ಕಿ.ಮೀ ಪ್ರದೇಶದ ಕಡಲ ತಟದಲ್ಲಿ ಸಮುದ್ರ ತೀರವು ಕೊರೆಯದಂತೆ ದಡದ ಮೇಲೆ ಹಾಕಿದ ಕಲ್ಲಿನ ಗೋಡೆ (ರಾಕ್‌ಗ್ರಾಯಿನ್ )ನಿರ್ಮಿಸಿ ಕಡಲ ತೀರದ ಸುರಕ್ಷತೆಯ ಜತೆಗೆ ಸಮುದ್ರ ತೀರವನ್ನು ವಿಸ್ತರಿಸುವ ಎ.ಡಿ.ಬಿ. ಯೋಜನೆಯಡಿ ಗವರ್ನಮೆಂಟ್ ಆಫ್ ಕರ್ನಾಟಕ ಪೋರ್ಟ್ ಆ್ಯಂಡ್ ಇನ್‌ಲ್ಯಾಂಡ್ ವಾಟರ್ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಕರಾವಳಿ ತೀರದ ಸುರಕ್ಷತೆಗೆ ಈ ಯೋಜನೆಯನ್ನು ೯೧.೦೯ ಕೋಟಿ ರೂ.ನಲ್ಲಿ ಎಡಿಬಿ ಪೈಲಟ್ ಪ್ರಾಜೆಕ್ಟ್ ಅನುಷ್ಟಾನಗೊಳಿಸಿದೆ.
ಸುಮಾರು ೩೫ ರಾಕ್‌ಗ್ರಾಯಿನ್‌ಗಳನ್ನು ಪರಸ್ಪರ ೧೨೫ ರಿಂದ ೧೩೦ ಮೀಟರ್ ಅಂತರಗಳಲ್ಲಿ ನಿರ್ಮಿಸಲಾಗಿದೆ.
ಕಲ್ಲುಗಳನ್ನು ಹೇರುವ ಮೊದಲು ತಳಭಾಗದಲ್ಲಿ ಜಿಯೋ ಟೆಕ್ಸ್ ಟೈಲ್ಸ್ ಫೈಬರ್ ಹೊದಿಕೆಯನ್ನು ಬಳಸಿಕೊಂಡು ಅದರ ಮೇಲ್ಭಾಗದಲ್ಲಿ ೧೦ ರಿಂದ ೧೦೦ ಕೆ.ಜಿ. ಭಾರದ ಕಲ್ಲುಗಳು, ಅನಂತರದಲ್ಲಿ ೧೦೦ ರಿಂದ ೨೦೦ ಕೆ.ಜಿ. ಭಾರದ ಕಲ್ಲುಗಳನ್ನು ಹಾಕಲಾಗುತ್ತದೆ. ಅದರ ಮೇಲ್ಭಾಗದಲ್ಲಿ ೧ರಿಂದ ೩ ಟನ್ ಭಾರದ ಕಲ್ಲುಗಳನ್ನು ಹಂದರವಾಗಿ ಪೇರಿಸಿಡಲಾಗಿದೆ. ಮುಂದುವರೆದು ೨ ರಿಂದ ೪ ಟನ್ ಭಾರದ ಕಲ್ಲುಗಳ ಪದರವನ್ನು ನಿರ್ಮಿಸಲಾಗಿದೆ.
೬೫ –೬೮ ಮೀಟರ್ ಉದ್ದಕ್ಕೆ `ಐ` ಮಾದರಿ–ಇಳಿಜಾರು ರೂಪದಲ್ಲಿ ನಿರ್ಮಾಣ :
ಇದು ಸಮುದ್ರದ ಕಡೆಯಿಂದ -೧.೫ ಮೀಟರ್ (ಚಾರ್ಟೆಡ್ ಡಾಟಮ್‌ನಿಂದ)ಆಳದಿಂದ ದಡದ ಅಂಚಿನೆಡೆಗೆ ವಿನ್ಯಾಸದನ್ವಯ ೧.೬೫ ಮೀಟರ್ ಎತ್ತರ ಇದ್ದು, ೬೫ ರಿಂದ ೬೮ ಮೀಟರ್ ಉದ್ದಕ್ಕೆ ಐ ಮಾದರಿಯಲ್ಲಿ ಇಳಿಜಾರು ರೂಪದಲ್ಲಿ ನಿರ್ಮಿಸಲಾಗಿದೆ. ರಸ್ತೆಯ ಭಾಗದಿಂದ ೧೦ ರಿಂದ ೨೦ ಮೀ ಅಂತರದಲ್ಲಿ ಅಪ್ರೋಚಿಂಗ್ ಸ್ಥಳವನ್ನು ಕಾಯ್ದಿರಿಸಲಾಗಿದೆ.
ಎಡಿಬಿ ಪೈಲಟ್ ಪ್ರಾಜೆಕ್ಟ್ ನಡಿ ಬೀಚ್ ಫಾರ್ಮೇಶನ್ ಉದ್ದೇಶದಿಂದ ಯೋಜನೆಯು ಅನುಷ್ಠಾನಗೊಂಡಿದ್ದು, ಅದುವೇ ತಡೆಗೋಡೆಯಾಗಿ ಪರಿಣಮಿಸುತ್ತಿದೆ. ಇದುವರೆಗೆ ಪ್ರಸ್ತುತ ಮಳೆಗಾಲದಲ್ಲಿ ೩ ಚಂಡ ಮಾರುತಗಳನ್ನು ನಿರ್ಮಾಣ ಹಂತದಲ್ಲಿರುವ ಈ ಗ್ರಾಯಿನ್‌ಗಳು ಎದುರಿಸಿದ್ದು, ಕಲ್ಲುಗಳು ಬೀಳಲಿಲ್ಲ. ಅಥವಾ ಚದುರಲಿಲ್ಲ ಎಂದು ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣೆ ಯೋಜನೆಯ ಮಂಗಳೂರು ಕಚೇರಿಯು ಮಾಹಿತಿಯನ್ನು ನೀಡಿತ್ತು.
- ಇದೀಗ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸುವ ಮೂಲಕ ಮಳೆಗಾಲದ ರಕ್ಕಸ ಗಾತ್ರದ ಸಮುದ್ರದಲೆಗಳು ನೀಡುತ್ತಿದ್ದ ಆತಂಕಕ್ಕೆ ಮುಕ್ತಿಯನ್ನು ಕಂಡು ಕೊಂಡಿದ್ದು. ರಸ್ತೆ ಸಂಪರ್ಕವೂ ಕಡಿತವಾಗುತ್ತಿಲ್ಲ. ರಸ್ತೆಯಲ್ಲಿ ವಿಪರೀತ ಪ್ರಮಾಣದ ಮರಳು ಶೇಖರಣೆಗೊಳ್ಳುತ್ತಿಲ್ಲ. ನೆಮ್ಮದಿಯ ದಿನಗಳನ್ನು ಕಾಣುವಂತಾಗಿದೆ. ಎಂದು ಉದ್ಯಾವರ ಪಡುಕರೆ ಕಡಲತಡಿ ನಿವಾಸಿ ಸರೋಜಿನಿ ಮೈಂದನ್ ಸಂತಸಭರಿತರಾಗಿ ಹೇಳಿದ್ದಾರೆ.
- ತಡೆಗೋಡೆ ನಿರ್ಮಾಣದ ಬಳಿಕದ ಮಳೆಗಾಲದಲ್ಲಿ ತೀವ್ರ ತರಹದ ಕಡಲ್ಕೆರೆತ ಬಾಧಿಸುತ್ತಿಲ್ಲ. ಮನೆಗಳಿಗೆ, ತೆಂಗು ಸಹಿತ ಇತರೇ ತೋಟಗಳಿಗೆ ಅಪಾಯ ಕಂಡು ಬರುತ್ತಿಲ್ಲ. ಹೆಚ್ಚು ರಭಸದಿಂದ ಕೂಡಿರುವ ಸಮುದ್ರದ ಅಲೆಗಳು ರಸ್ತೆಯ ವರೆಗೆ ಬರುತ್ತದೆ. ನದಿಯನ್ನು ಸೇರುತ್ತಿಲ್ಲ. ಈ ಪೈಲಟ್ ಪ್ರಾಜೆಕ್ಟ್ ಕಡಲತಡಿಯ ನಿವಾಸಿಗಳಿಗೆ ರಕ್ಷಣೆಯನ್ನು ನೀಡಿದೆ. ಇನ್ನಷ್ಟು ಸುಸಜ್ಜಿತಗೊಳಿಸಿದಲ್ಲಿ ಭಯ -ಆತಂಕ ಇಲ್ಲ. ನದಿ ಕೊರೆತದಿಂದ ರಕ್ಷಣೆ ಬೇಕಿದೆ ಎನ್ನುತ್ತಾರೆ ಪಡುಕೆರೆಯ ಯೋಗೀಶ್ ಬಿ. ಕೋಟ್ಯಾನ್.

