ಕರಾವಳಿಯಲ್ಲಿ ಪ್ರೇತಗಳ ವಿವಾಹ : ಕರಾವಳಿಗರ ನಂಬಿಕೆ
ವಿಷೇಶ ವರದಿ: ಬಾಪೂ
(Udupi) ಉಡುಪಿ: ತುಳುನಾಡಿನ ರಾಜಧಾನಿ ಎಂದೇ ಹೇಳಲಾಗುವ ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುವ ಆಚರಣೆಯಾಗಿ ಖ್ಯಾತಿ ಪಡೆದಿದೆ.
ಇದೇತಿಂಗಳ ಅಮವಾಸ್ಯೆಯಂದು ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ತಂಡದಿಂದ ನೆರವೇರಿತು.
ಆಕಸ್ಮಿಕ, ಅಕಾಲಿಕ ಮರಣ ಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಶೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ ಇರುತ್ತದೆ ಮತ್ತು ಪ್ರಾಯ ಕಳೆದಂತೆ ಆಶೆಯನ್ನು ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇದ್ದು ಪೀಡನೆ ನೀಡುತ್ತಿರುವುದಕ್ಕೆ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡಲಾಗುತ್ತದೆ ಎನ್ನುವುದು ಇಲ್ಲಿಯ ಜನರ ನಂಬಿಕೆ.
ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ಎದುರು ಭಾಗದಲ್ಲಿರುವ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನ ಕಾಯಿ ಮೂಲಕ ನಾನಾ ಕರ್ಮಾಂಗ ಮಾಡಿ, ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಎಂದರೆ ಗಂಡು, ಹೆಣ್ಣಿಗೆ ಮಧುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ, ಪಂಚೆ, ಶಾಲು, ಕಾಲುಂಗುರ, ಕರಿಮಣಿ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ.
ಬಳಿಕ ತೆಂಗಿನಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನ ಕಾಯಿಜೊತೆ ಅವರಿಗೆ ಸಂಭಂದಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ. ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿಯಾಗಿದ್ದು, ವಿಜ್ಞಾನಯುಗದಲ್ಲೂ ಮುಂದುವರಿಯುತ್ತಿದೆ.
ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರೇತಗಳ ವಿವಾಹದ ಕುರಿತ ಜಾಹಿರಾತು ಬಾರೀ ಗಮನಸೆಳೆದಿದ್ದು, ಹೆಚ್ಚಿನ ಜನರು ಇದರಿಂದ ಆಕರ್ಷಿತರಾಗಿ ಮಾಹಿತಿ ಕಲೆ ಹಾಕುತ್ತಿರುವುದು ಕಂಡು ಬಂದಿದೆ.
