ಎಲ್ಲೂರು ಪರಿಸರದಲ್ಲಿ ಸಾಮೂಹಿಕ ಭತ್ತದ ಕೃಷಿ, ಸಾರ್ವತ್ರಿಕ ಶ್ಲಾಘನೆ
CREDIT : VIJJU, UCHILA
ಎಲ್ಲೂರು, ಕಂಚಿನಡ್ಕ, ಪಿಲಾರುಕಾನ, ಮುದರಂಗಡಿ, ಕಳತ್ತೂರು, ಪೆಜತ್ತಕಟ್ಟೆ, ಬೆಳಪು ಮಲಂಗೋಳಿ ಪರಿಸರದಲ್ಲಿ ಹರೀಶ ಪೂಜಾರಿ ತಂಡದಿಂದ “ಬತ್ತದ” ಭತ್ತದ ಕೃಷಿ
(Yelluru) ಎಲ್ಲೂರು: ಎಲ್ಲೂರು ಗ್ರಾಮದ ಅರಂತಡೆಯ ಹರೀಶ್ ಪೂಜಾರಿ ನೇತೃತ್ವದಲ್ಲಿ ಹಲವಾರು ಮಂದಿ ಜತೆಗೂಡಿ ಭತ್ತದ ಕೃಷಿಯನ್ನು ಮುಂದುವರಿಸುತ್ತಿದ್ದು, ಇದು ಇತರರಿಗೂ ಮಾದರಿ ಆಗಿದೆ.
ಸಾಮೂಹಿಕವಾಗಿ ಮಾಡುತ್ತಿರುವ ಭತ್ತದ ಕೃಷಿಯಿಂದಾಗಿ ಕೃಷಿ ಕೂಲಿ ಕಾರ್ಮಿಕರು ಕೆಲಸ ಪಡೆಯುವ ಜೊತೆಗೆ ಸುಮಾರು 4 ಎಕರೆ ಗದ್ದೆಯು ಹಚ್ಚ ಹಸುರಾಗಿ ನಳ ನಳಿಸುತ್ತಿದೆ.
ಎಲ್ಲೆಡೆ ಯಾಂತ್ರಿಕೃತ ಕೃಷಿಗೆ ಒತ್ತು ನೀಡುತ್ತಾ ಬರುತ್ತಿದ್ದರೆ, ಹರೀಶ ಪೂಜಾರಿ ಅವರು ಪಡುಬಿದ್ರಿ, ಕಂಚಿನಡ್ಕ, ಪಿಲಾರುಕಾನ, ಮುದರಂಗಡಿ, ಕಳತ್ತೂರು, ಪೆಜತ್ತಕಟ್ಟೆ, ಬೆಳಪು ಮಲಂಗೋಳಿ ಭಾಗದ ಸಾಂಪ್ರದಾಯಿಕ ನೇಜಿ ನಾಟಿಯನ್ನು ನಡೆಸುವ ೩೦ಕ್ಕೂ ಅಧಿಕ ಮಹಿಳಾ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ಭತ್ತದ ಸಸಿ ನಾಟಿ ಮಾಡಿರುವುದು ವಿಶೇಷತೆಯಾಗಿದೆ.
ಸುಮಾರು 4 ಎಕರೆ ಗದ್ದೆಯ ಪ್ರದೇಶವನ್ನು 3 ಟ್ರಾಕ್ಟರ್ ಬಳಸಿ ಉಳುಮೆ ಮಾಡಿ ಹಸನುಗೊಳಿಸಿ, ಎಂಒ4 ಮತ್ತು ಮೀಟರ್ ತಳಿಯ 20 ದಿನದ ನೇಜಿಯನ್ನು ಸಿದ್ಧಪಡಿಸಿ, ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಗದ್ದೆಯಿಂದ ಬೇರ್ಪಡಿಸಿ ಸೂಕ್ತ ರೀತಿಯಲ್ಲಿ ಇರಿಸಿದ್ದು, ಬಳಿಕ ಹರೀಶ್ ಪೂಜಾರಿ ಮತ್ತು ನೆರೆಹೊರೆಯವರು ಸೇರಿಕೊಂಡು ಗದ್ದೆಗಳಿಗೆ ಸಾಗಿಸಿ ನೇಜಿ ನಾಟಿಯನ್ನು ಒಂದೇ ದಿನದಲ್ಲಿ ಸಂಪೂರ್ಣ ಗೊಳಿಸಿದ್ದಾರೆ.
ಹಿರಿಯರಿಂದ ಬಂದ ಕೃಷಿಯನ್ನು ಸಂಪ್ರದಾಯ ಬದ್ಧವಾಗಿ ಮುನ್ನಡೆಸುವ ಮೂರ್ತೆದಾರ ಹರೀಶ್ ಪೂಜಾರಿಯು ಕೃಷಿಯಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಯಾರೇ ಕೃಷಿ ಮಾಡುವುದಾದರೂ ಸಹಕಾರವನ್ನು ನೀಡುವ ಹರೀಶ್ ಪೂಜಾರಿ, ಮಾರ್ಗದರ್ಶನವನ್ನು ಮಾಡಿ ಕೃಷಿಗೆ ಪೂರಕವಾದ ಕೃಷಿ ಕೂಲಿಯಾಳುಗಳು, ಉಳುಮೆ ಯಂತ್ರಗಳನ್ನು ವ್ಯವಸ್ಥೆ ಮಾಡಿ ಕೊಟ್ಟು ಸಹಕರಿಸಿ ಯುವ ಜನಾಂಗಕ್ಕೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆ ಮೂಲಕ ಸ್ಥಳೀಯವಾಗಿ ಕೃಷಿಕರ ಸ್ನೇಹಿಯಾಗಿ ಬೆಳೆದು ನಿಂತಿದ್ದು, ಈ ಬಾರಿಯೂ ಊರಿನ ಹಾಗೂ ಸ್ಥಳೀಯ ಮಹಿಳಾ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಕೃಷಿ ಕಾಯಕವನ್ನು ನಡೆಸುವ ಮೂಲಕ ಮಹಿಳಾ ಕೃಷಿಕರನ್ನೂ ಹುರಿದುಂಬಿಸಿದ್ದು ಅನುಕರಣೀಯವಾಗಿದೆ.
ಸಾಮೂಹಿಕ ಕೃಷಿ ವಿಶೇಷತೆ :
ಈ ಪರಿಸರದಲ್ಲಿ ಸಾಮೂಹಿಕ ಕೃಷಿ ಶೈಲಿಯು ಬಹಳಷ್ಟು ವಿಶೇಷತೆ ಪಡೆಯುತ್ತಿದೆ. ಹಿರಿಯ ಪ್ರಮುಖ ಕೃಷಿಕರಾದ ಎಲ್ಲೂರು ಜೋಗಿ ತೋಟ ಶೇಖರ ಪೂಜಾರಿ, ಪಾಂಡು ಶೆಟ್ಟಿ ಎಲ್ಲೂರು, ಮಿತ್ರ, ಪ್ರಶಾಂತ್ ಆಚಾರ್ಯ ಎಲ್ಲೂರು ಸಹಿತ ಇತರರು ಸೇರಿಕೊಂಡು ಈ ವ್ಯಾಪ್ತಿ ಪ್ರದೇಶದಲ್ಲಿ ಸುಮಾರು ೧೫ ಎಕರೆಗೂ ಮಿಕ್ಕಿ ಕೃಷಿ ಚಟುವಟಿಕೆಯನ್ನು ಜೊತೆಯಾಗಿ ನಡೆಸುತ್ತಾರೆ.
ಪರಸ್ಪರ ಗದ್ದೆಗೆ ನೀರು ಹಾಯಿಸುವಲ್ಲಿಂದ ಹಿಡಿದು ನೇಜಿ ಹಾಕುವುದು, ನೇಜಿ ಕೀಳುವುದು, ನೇಜಿ ನಾಟಿ ಮತ್ತು ಪಾಲನೆ ಪೋಷಣೆಯ, ಪರಸ್ಪರ ಸಹಕಾರದಿಂದ ನಡೆಸುವ ಸಾಮೂಹಿಕ ಕೃಷಿಯೂ ಸರ್ವತ್ರ ಮಾದರಿಯೂ ಶ್ಲಾಘನೆಗೆ ಪಾತ್ರವಾಗಿದೆ.
ಹಿರಿಯ ಕೃಷಿಕ ಪಾಂಡು ಶೆಟ್ಟಿಯವರು ಮಾಧ್ಯಮಕ್ಕೆ ಮಾಹಿತಿ ನೀಡಿ, ಹಿರಿಯರ ಕೃಷಿ ಭೂಮಿಯನ್ನು ಹಡೀಲು ಬಿಡದೆ ತನ್ನ ಮೂರ್ತೆದಾರಿಕೆ ವೃತ್ತಿಯ ನಡುವೆಯೂ ಭತ್ತದ ಕೃಷಿ ಕಾಯಕ ನಡೆಸುತ್ತಿರುವ ಹರೀಶ್ ಪೂಜಾರಿ ಅವರ ಕೃಷಿ ಕಾಯಕ ಶ್ಲಾಘನೀಯ. ಯುವ ಜನತೆಯನ್ನು ಮತ್ತು ಸಮೀಪದ ಕೃಷಿಕರನ್ನು ಒಗ್ಗೂಡಿಸಿಕೊಂಡು ನಡೆಸುವ ಕೃಷಿ ನಿಜಕ್ಕೂ ಮಾದರಿಯಾಗಿದೆ ಎನ್ನುತ್ತಾರೆ.
ಹಿರಿಯ ಪ್ರಮುಖ ಕೃಷಿಕರಾದ ಎಲ್ಲೂರು ಜೋಗಿ ತೋಟ ಶೇಖರ ಪೂಜಾರಿಯವರು ಮಾತನಾಡಿ, ನೆರೆಹೊರೆಯ ಕೃಷಿಕರನ್ನು ಒಗ್ಗೂಡಿಸಿಕೊಂಡು ಪರಸ್ಪರ ಸಹಕಾರದೊಂದಿಗೆ ಕೃಷಿಯನ್ನು ನಡೆಸುವ ಹರೀಶ್ ಪೂಜಾರಿ ಅವರ ಕೃಷಿ ಕಾಯಕ ಎಲ್ಲೆಡೆ ಪಸರಿಸಬೇಕಿದೆ. ಹಡೀಲು ಬಿದ್ದಿರುವ ಗದ್ದೆಗಳನ್ನು ನೆರೆ ಹೊರೆಯ ಕೃಷಿಕರು ಒಟ್ಟಾಗಿ ಕೃಷಿ ಕಾಯಕವನ್ನು ನಡೆಸುವಲ್ಲಿ ಪರಿಶ್ರಮ ಪಟ್ಟ ಹರೀಶ್ ಪೂಜಾರಿ ನಡೆಸುತ್ತಿರುವ ಭತ್ತದ ಕೃಷಿಯು ಮಾದರಿಯಾಗಿದೆ ಎಂದರು.

