ಹೆದ್ದಾರಿಯಲ್ಲಿ ಬಸ್ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ, ಮಹಿಳೆಗೆ ತೀವ್ರಗಾಯ
(Padubidri) ಪಡುಬಿದ್ರಿ, ಜೂ. 21: ಸರ್ವಿಸ್ ರಸ್ತೆಗಿಳಿಯದೇ ಹೆದ್ದಾರಿಯನ್ನೇ ಬಳಸಿ ಸಾಗುವ ಚಾಳಿ ಬಸ್ಗಳಿಗೆ ಪಡುಬಿದ್ರಿಯಲ್ಲಿ ಸತತವಾಗಿ ಮುಂದುವರಿದಿದ್ದು, ಇದರಿಂದಾಗಿ ಶುಕ್ರವಾರ ಸಂಜೆಯ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿಯಾಗಿ ಮಂಗಳೂರು ಮಂಗಳಾದೇವಿ ಪರಿಸರದ ಮಹಿಳೆ ಪುಷ್ಪಲತಾ ಆಚಾರ್ಯ(೫೬) ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೇ ನಿಲ್ಲಿಸಿದ ಪರಿಣಾಮವಾಗಿ ಅದರ ಹಿಂದಿನಿಂದ ಹೆದ್ದಾರಿಯಲ್ಲೇ ಬಂದಿದ್ದ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿಯಾಗಿದೆ. ಕಾರಲ್ಲಿ ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ತಾಯಿ, ಮಗಳು ಹಾಗೂ ಸಂಬಂಧಿಯೋರ್ವರ ಸಹಿತ ಮೂರು ಮಂದಿ ಇದ್ದು, ಮುಂದಿನ ಸಾಲಿನಲ್ಲಿ ಚಾಲಕನ ಬದಿಯಲ್ಲೇ ಕುಳಿತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದೆ. ಗಾಯಗೊಂಡ ಅವರನ್ನು ಪಡುಬಿದ್ರಿಯ ಪ್ರಥಮ ಚಿಕಿತ್ಸೆಯ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

