ಗುರುಪೂರ್ಣಿಮೆಯಂದು ಮಕ್ಕಳಿಂದ ಹೆತ್ತವರ ಪೂಜೆ
ಅಮೃತಾ ವಿದ್ಯಾಲಯಂನಲ್ಲಿ ಸನಾತನ ಸಂಪ್ರದಾಯ ಅನಾವರಣ
ಮಂಗಳೂರು: ಇಲ್ಲಿನ ಅಮೃತಾ ವಿದ್ಯಾಲಯಂ ಶಾಲೆಯ ಆಶ್ರಯದಲ್ಲಿ ಗುರು ಪೂರ್ಣಿಮಾ ದಿನದ ಶುಭ ಮುಹೂರ್ತದಲ್ಲಿ ನಡೆಯುವ ವಿಶಿಷ್ಟ ಮತ್ತು ಸಾಂಪ್ರದಾಯಿಕ ‘ಸಂಸ್ಕೃತಿ ಪೂಜೆ’ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ ಉರ್ವ ಶ್ರೀ ಮಾರಿಯಮ್ಮ ದೇವಳದ ಸಭಾಂಗಣದಲ್ಲಿ ಜರಗಿತು.
ಗುರು ಪೂರ್ಣಿಮೆಯ ಮೌಲ್ಯವನ್ನು ಪ್ರತಿಪಾದಿಸುವ ಈ ವಿಶಿಷ್ಟ ಆಚರಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಮೊದಲ ಗುರುಗಳಾದ ತಮ್ಮ ತಂದೆ ತಾಯಿ, ಪೋಷಕರು ಒದಗಿಸಿದ ಅಪಾರ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನಕ್ಕಾಗಿ ಗೌರವ ಮತ್ತು ಕೃತಜ್ಞತೆ ಸಲ್ಲಿಸಿ ಅವರನ್ನು ಪೂಜಿಸಿ ಗೌರವಿಸಿದರು. ಈ ಪೂಜೆಯ ಮೂಲಕ, ವಿದ್ಯಾರ್ಥಿಗಳು ತಮ್ಮ ಕುಟುಂಬದಿಂದ ಪಡೆದ ಅಮೂಲ್ಯವಾದ ಬೆಂಬಲಕ್ಕಾಗಿ ಆಳವಾದ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಸಂಪೂಜ್ಯಾ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಪ್ರವಚನ ನೀಡುತ್ತಾ, ನಾವು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಮರೆತಿದ್ದೇವೆ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಮರುಜೋಡಿಸಲು ಕ್ರಮೇಣ ಜಾಗೃತಗೊಳ್ಳಬೇಕಾಗಿದೆ ಎಂದು ಸ್ವಾಮಿನಿ ಅಮ್ಮ ಒತ್ತಿ ಹೇಳಿದರು. ಸಂಸ್ಕೃತಿ ಪೂಜೆ ಮತ್ತು ಇತರ ಸನಾತನ ಆಚರಣೆಗಳು ಸಾರ್ಥಕ ಜೀವನಕ್ಕೆ ಅವಿಭಾಜ್ಯವಾಗಿದೆ ಎಂದು ಒತ್ತಿ ಹೇಳಿದ ಅವರು ತಮ್ಮ ಮಕ್ಕಳು ಅಂತಹ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಸಹ ಸಮಯವನ್ನು ವಿನಿಯೋಗಿಸಬೇಕು. ಇದರಿಂದ ಒಂದು ಪರಂಪರೆ ಅಗಾಧವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ವಿದ್ಯಾರ್ಥಿಗಳು ಮನಮೋಹಕ ನೃತ್ಯ ಸಂಕೀರ್ತನೆ ಹಾಗೂ ವಿವಿಧ ಗೀತಗಾಯನ ನಡೆಸಿ ಕಾರ್ಯಕ್ರಮಕ್ಕೆ ಭಕ್ತಿಪ್ರಧಾನ ಪ್ರಾರಂಭ ನೀಡಿದರು. ಶಾಲಾ ಪ್ರಾಂಶುಪಾಲೆ ಅಕ್ಷತಾ ಶೆಣೈ ಪಾದುಕಾ ಪೂಜೆ ನೆರವೇರಿಸಿದರು. ಯುವ ವಿಭಾಗದ ಆಯುಧ್ ತಂಡದಿಂದ ಭಜನಾ ಸಂಕೀರ್ತನ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ದೇವಿಪ್ರಸಾದ್ ಸಂಸ್ಕೃತಿ ಪೂಜೆ ಬಗೆಗಿನ ತಮ್ಮ ಅನುಭವ ಮತ್ತು ಮಹತ್ವಗಳನ್ನು ತಿಳಿಸಿದರು. ಇಂತಹ ಅರ್ಥಪೂರ್ಣ ಸಂಪ್ರದಾಯಗಳನ್ನು ಎತ್ತಿ ಹಿಡಿಯುವಲ್ಲಿ ಶಾಲೆಯು ಮಾಡುತ್ತಿರುವ ಬದ್ಧತೆಯನ್ನು ಶ್ಲಾಘಿಸಿದರು.
ಬಳಿಕ ಶಾಲಾ ಪೋಷಕ ವೃಂದದ ಸದಸ್ಯರು ಮಾತನಾಡಿ ಅಮೃತ ವಿದ್ಯಾಲಯಂ ವಿಶೇಷವಾಗಿ ಆಯೋಜಿಸಿರುವ ಈ ವಿಶಿಷ್ಟ ಆಚರಣೆಯು ಮಕ್ಕಳಲ್ಲಿ ಸಾತ್ವಿಕ ಮನೋಭಾವ ಹಾಗೂ ಸಭ್ಯ ವ್ಯಕ್ತಿತ್ವ ಬೆಳೆಸುವಲ್ಲಿ ಪ್ರಮುಖವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಶಾಲಾ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ, ಶಿಕ್ಷಕ ಶಿಕ್ಷಕೇತರ ವೃಂದ, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









