ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ
(Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉಡುಪಿಯ ವಕೀಲೆಯಾದ ಕುಮಾರಿ ಅಕ್ಷತಾ ಕುಲಾಲ್ರವರು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಅಕ್ಷತಾರವರು ಮಾತನಾಡಿ, ವಿದ್ಯಾರ್ಥಿಗಳ ರಕ್ಷಣೆಗೆ ಪ್ರಬಲವಾದ ಪೋಕ್ಸೋ ಕಾನೂನು ಇದೆ. ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ, ಬಲಾತ್ಕಾರ ಇತ್ಯಾದಿ ತೊಂದರೆಗೊಳಗಾದರೆ ಆಗ ಅದನ್ನು ತಮ್ಮ ಹೆತ್ತವರಿಗೋ, ತಮ್ಮ ಅಧ್ಯಾಪಕರಿಗೊ ಅಥವಾ ವಕೀಲರಿಗೋ ತಿಳಿಸಬೇಕು, ಸುಮ್ಮನೆ ಮುಚ್ಚಿಡಬಾರದು.
ಈಗ ಪೋಕ್ಸೋ ಕಾಯ್ದೆಯಡಿಯಲ್ಲಿ ಹದಿನೆಂಟು ವರ್ಷಕ್ಕಿಂತ ಕೆಳಗಿನ ಯಾರೇ ಆದರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಅವರು ಕಾನೂನಿನ ಮೊರೆ ಹೋದರೆ, ಅವರಿಗೆ ತೊಂದರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಆಗುತ್ತದೆ. ಹಿರಿಯರು ತಮ್ಮ ಮಕ್ಕಳನ್ನು 18 ವರ್ಷಕ್ಕಿಂತ ಮೊದಲೇ ವಿವಾಹ ಮಾಡುವುದಕ್ಕೆ ಪ್ರಯತ್ನ ಪಟ್ಟರೆ ಅದನ್ನು ಕಾನೂನಿನಡಿ ತಡೆಯಬಹುದು. ಪ್ರಯತ್ನ ಪಟ್ಟವರಿಗೆ ಶಿಕ್ಷೆಯಾಗುತ್ತದೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅದಮಾರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಪ್ರೊ. ನಿತ್ಯಾನಂದರವರು ಮಾತನಾಡಿ, “ಮಕ್ಕಳಿಗೆ ಕಾನೂನಿನ ಅರಿವು ಇರಬೇಕು. ಯಾರ ಒತ್ತಡಕ್ಕೂ ಕೂಡ ಅವರು ಮಣಿಯುವ ಅಗತ್ಯವಿಲ್ಲ. ತಮ್ಮ ಮೇಲಾಗುವ ಅನಗತ್ಯ ದೌರ್ಜನ್ಯವನ್ನು ತಡೆಯಬಹುದಾಗಿದೆ” ಎಂದರು. ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಎ.ವಿ, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಂದನ್ ರಾವ್ ಸ್ವಾಗತಿಸಿದರು. ಬಿ. ನಿತ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ಕಾಮತ್ ವಂದಿಸಿದರು.

