ಕೋಟ: ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಕೋಟ ಪಂಚವರ್ಣದ ಕಾರ್ಯಕ್ರಮ ವಿಶಿಷ್ಟವಾದದ್ದು – ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ
ಕೋಟ: ಪಂಚವರ್ಣ ಸಂಸ್ಥೆಯ ಕಾರ್ಯಕ್ರಮಗಳೇ ವಿಶಿಷ್ಟವಾದದ್ದು, ಮನೆ ಮಾತಾಗಿ ಬೆಳೆದು ನಿಂತಿದೆ ಎಂದು ಕುಂದಾಪುರ ಉಪವಿಭಗಾಧಿಕಾರಿ ಮಹೇಶ್ಚಂದ್ರ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ನವೆಂಬರ್ ೧೬ ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದ ಒರೆಕೋರೆಗಳನ್ನು ತಿದ್ದುವ ಜತೆಗೆ ಸಮಾಜಮುಖಿ ಚಿಂತನೆಗಳನ್ನು ಸದಾ ಪಸರಿಸುವ ಸಂಘಟನೆಗಳು ಇಂದಿನ ದಿನದಲ್ಲಿ ಅಗತ್ಯವಾಗಿದೆ. ಈ ದಿಸೆಯಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ಹುಟ್ಟುಹಾಕಿ ದೊಡ್ಡ ದೊಡ್ಡ ಸಾಧಕರನ್ನು ಗೌರವಿಸುವ ಜತೆಗೆ ವಿದ್ಯಾರ್ಥಿಗಳನ್ನು ದತ್ತು ಪಡೆಯುವ, ಪರಿಸರಸ್ನೇಹಿ ಕಾರ್ಯಕ್ರಮಗಳು ಸಂಸ್ಥೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥಹ ಸಂಘಟನೆಗಳು ಊರಿನಲ್ಲಿ ಗಟ್ಟಿಯಾಗಿ ಬೇರೂರಬೇಕು ಎಂದು ಆಶಿಸಿದರು.
ಕೋಟ ಮಣೂರು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ಪಂಚವರ್ಣದ ಕಾರ್ಯಕ್ರಮಗಳು ಪಂಚಮುಖಿಯಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ನಾಂದಿಯಾಗಿದೆ ಎಂದು ಶುಭ ಹಾರೈಸಿ, ರಾಜ್ಯೋತ್ಸವದ ಮೂಲಕ ಸಾಧಕರಿಗೆ ಬಹುದೊಡ್ಡ ಗೌರವವನ್ನು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗೀತಾನಂದ ಟ್ರಸ್ಟ್ ನಿರ್ದೇಶಕಿ ಗೀತಾ ಆನಂದ ಕುಂದರ್, ಮನಸ್ಮಿತ ಫೌಂಡೇಶನ್ ಪ್ರವರ್ತಕ ಮನೋವೈದ್ಯ ಡಾ. ಪ್ರಕಾಶ್ ಸಿ ತೋಳಾರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಅಧ್ಯಕ್ಷೆ ವನಿತಾ ಉಪಾಧ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಮಂಡಲದ ಸದಸ್ಯ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

