ಉಡುಪಿ ಸಂತೆಕಟ್ಟೆ ಕಾಮಗಾರಿ ಅವ್ಯವಸ್ಥೆ– ಹೊಂಡಕ್ಕೆ ಬಿದ್ದ ದ್ವಿಚಕ್ರ ವಾಹನ ಮತ್ತು ಸವಾರ; ಪ್ರಾಣಾಪಾಯದಿಂದ ಪಾರು
(Udupi) ಉಡುಪಿ: ಸವಾರನೊಬ್ಬ ದ್ವಿಚಕ್ರ ವಾಹನ ಸಹಿತ ಹೊಂಡಕ್ಕೆ ಬಿದ್ದ ಘಟನೆ ಸಂತೆಕಟ್ಟೆ ಓವರ್ಪಾಸ್ ಕಾಮಗಾರಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಸಂತೆಕಟ್ಟೆ ಆಶೀರ್ವಾದ್ ಚಿತ್ರಮಂದಿರದ ವಿರುದ್ಧ ದಿಕ್ಕಿನಿಂದ ಹೊರಟ ವ್ಯಕ್ತಿ ನೇರವಾಗಿ ವಾಹನವನ್ನು ಹೊಂಡದತ್ತ ಚಲಾಯಿಸಿದ ಪರಿಣಾಮ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಮೇಲಕ್ಕೆತ್ತುವಲ್ಲಿ ಸ್ಥಳೀಯರು ಸಹಕರಿಸಿದ್ದಾರೆ.
ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಿತ್ಯ ಸಂಭವಿಸುತ್ತಿದ್ದು ಕಾಮಗಾರಿ ಅವ್ಯವಸ್ಥೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

