ಕಾಪು ಪುರಸಭೆ ಸಾಮಾನ್ಯ ಸಭೆ : ಠಾಣೆಯ ಎದುರು ನಿಲ್ಲಿರುವ ಅಪಘಾತದ ವಾಹನಗಳಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹ
(Kaup) ಕಾಪು : ಕಾಪು ಪುರಸಭೆಯ ಸಾಮಾನ್ಯ ಸಭೆ ಮಂಗಳವಾರ ಪುರಸಭೆಯ ಇಂದಿರಾಗಾಂಧಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಾಪು ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ವಹಿಸಿದ್ದರು.
ಸಭೆಯಲ್ಲಿ ಕಾಪು ಪೊಲೀಸ್ ಠಾಣೆಯ ಎದುರು ಅಪಘಾತದ ವಾಹನಗಳನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರವಾಗಿ ಇದಕ್ಕೆ ಪ್ರರ್ಯಾಯ ವ್ಯವಸ್ಥೆಗೆ ಕಲ್ಪಿಸುವಂತೆ ಪುರಸಭಾ ಸದಸ್ಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು. ಅಂತೆಯೆ ಕಾಪು ಪೇಟೆಯಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲ್ಲುವಿಕೆ, ಶುಕ್ರವಾರ ಸಂತೆಯ ದಿವಸದ ತೊಂದರೆ ತಪ್ಪಿಸಲು ಪೋಲಿಸ್ ಇಲಾಖೆಯು ಸಹಕರಿಸುವ ಬಗ್ಗೆ ಚರ್ಚಿಸಲಾಯಿತು.
ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿ, ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ಪುರಸಭೆಯ ನಿಯಮಾವಳಿಗಳ ಪ್ರಕಾರ ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಯಬೇಕಾಗಿದ್ದು ಎರಡು ತಿಂಗಳ ಬಳಿಕ ಮಾಡಿದ್ದೇಕೆ? ಶಾಸಕರಿಗಾಗಿಯೇ ಎಂದು ವಿರೋಧ ಪಕ್ಷದ ಸದಸ್ಯ ಕೇಳಿದಾಗ, ನೀವು ಆಡಳಿತದಲ್ಲಿದ್ದಾಗಲೂ ನೀವು ಹೀಗೆ ಮಾಡಿದ್ದು. ಅದನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಎಂದು ಆಡಳಿತದ ಪಕ್ಷದ ಸದಸ್ಯರು ಉತ್ತರಿಸಿದರು.
ನಗರ ಯೋಜನಾ ಪ್ರಾಧಿಕಾರದಲ್ಲಿ ಬ್ರೋಕರ್ ಗಳ ಹಾವಳಿಯ ಜೊತೆಗೆ ಲಂಚಾವತಾರದಿಂದ ಸಾಮಾನ್ಯ ಜನರಿಗೆ ಬರಲಾಗುತ್ತಿಲ್ಲ. ಬ್ರೋಕರ್‌ಗಳು ಕಛೇರಿಯಲ್ಲಿ ಕಡತಗಳನ್ನು ಪರಿಶೀಲಿಸುವುದು ತಪ್ಪು. ಅವರಿಗೆ ಅಧಿಕಾರ ನೀಡಿದವರಾರು ಎಂದು ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಯಾವುದೇ ತಕರಾರು ಬರದಂತೆ ಕೆಲಸ ನಿರ್ವಹಿಸುವ ಭರವಸೆಯನ್ನು ಅಧಿಕಾರಿ ನೀಡಿದರು.
ಮುಂದಿನ ದಿನಗಳಲ್ಲಿ ಕಾಪು ಹೊಸ ಮಾರಿಗುಡಿಯ ಬ್ರಹ್ಮಕಲಶಾಧಿ ಕಾರ್ಯಕ್ರಮ ನಡೆಯಲಿದ್ದು, ತ್ಯಾಜ್ಯ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಸರದ್ಯರು ಅಧಿಕಾರಿಗೆ ಮನವಿ ಮಾಡಿದರು.
ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ತ್ಯಾಜ್ಯ ನಿರ್ವಹಣಾ ಸಮಸ್ಯೆ ಮುಗಿಲು ಮುಟ್ಟಿದ್ದು, ಪುರಸಭೆಯ ಎಲ್ಲೂರಿನ ಘಟಕದಲ್ಲಿ ತ್ಯಾಜ್ಯ ನಿರ್ವಹಣೆಗೆ ಅವಕಾಶ ನೀಡಬೇಕೆಂದು ಮನವಿ ಬಂದಿದ್ದು, ಪುರಸಭಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಧ್ಯ ಪ್ರವೇಶಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಲ್ಲೂರು ಘಟಕದ 10 ಎಕರೆಯಲ್ಲಿ ಜಮೀನಿನಲ್ಲಿ 5 ಎಕರೆ ಭೂಮಿ ಕಾಪು ಪುರಸಭೆ ಹೆಸರಿನಲ್ಲಿದೆ. ಉಳಿದ ಇನ್ನೈದು ಎಕರೆಯು ಜಿಲ್ಲಾ ತ್ಯಾಜ್ಯ ಘಟಕದ ಹೆಸರಿನಲ್ಲಿದ್ದ ಕಾರಣ, ಪ್ರಾಧಿಕಾರ ಅಡಿಯಲ್ಲಿರುವ ಉಚ್ಚಿಲ ಬಡಾ ಗ್ರಾಮ ಪಂಚಾಯತಿಗೆ ನೀಡಲು ಆಕ್ಷೇಪ ಸಲ್ಲದು. ಆದರೆ, ಉಳಿದ ಐದು ಎಕ್ರೆ ಪ್ರದೇಶದಲ್ಲಿ ಘಟಕ ಸ್ಥಾಪಿಸಿ ಇತರ ಗ್ರಾಮ ಪಂಚಾಯತ್ ಉಪಯೋಗಿಸಬಹುದು ಎಂದರು. ಇದಕ್ಕೆ ಪುರಸಭಾ ಸದಸ್ಯರು ಒಪ್ಪಿದರು.
ಇನ್ನುಳಿದಂತೆ ನೀರಿನ ಪೈಪ್ ಹಾಕಲು ರಸ್ತೆ ಅಗೆತದಿಂದ ತೊಂದರೆಯ ಬಗ್ಗೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯ ಬಗ್ಗೆ, ಪುರಸಭಾ ಸದಸ್ಯರ ಗೌರವ ಧನ ಹೆಚ್ಚಿಸುವಲ್ಲಿ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸುವ ಬಗ್ಗೆಯೂ ಚರ್ಚಿಸಲಾಯಿತು.
ಕೇವಲ ಮೂರ್ನಾಲ್ಕು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಹೆಚ್ಚಿನ ಇಲಾಖೆಗಳ ಗೈರು ಎದ್ದು ಕಾಣುತ್ತಿತ್ತು. ಇದು ಮುಂದೆ ಪುನರಾವರ್ತನೆ ಆಗಬಾರದೆಂದು ಸದಸ್ಯರು ಆಗ್ರಹಿಸಿದರು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸವಿತಾ ಶಿವಾನಂದ, ಸ್ಥಾಯಿ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ನಾಗರಾಜ್, ಕಾಪು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

