ಎರ್ಮಾಳು ; ವೇಗಧೂತ ಬಸ್ ಚಾಲಕರ ಓವರ್ ಟೇಕ್ ಭರಾಟೆ – ಡಿವೈಡರ್ ಏರಿದ ಬಸ್, ತಪ್ಪಿದ ಅನಾಹುತ
(Yermal) ಎರ್ಮಾಳು : ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66 ರ ಬುಧಗಿ ಪೆಟ್ರೋಲ್ ಬಂಕ್ ಎದುರು ಎರಡು ವೇಗದೂತ ಬಸ್ಸುಗಳ ನಡುವಿನ ಪೈಪೋಟಿಯಿಂದ ಒಂದು ಬಸ್ಸು ಡಿವೈಡರ್ ಏರಿ ಇನ್ನೊಂದು ಪಾರ್ಶ್ವದ ರಸ್ತೆಯತ್ತ ತಿರುಗಿ ನಿಂತ ಘಟನೆ ಗುರುವಾರ ಸಂಜೆ ಘಟಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಉಚ್ಚಿಲದಲ್ಲಿ ಪ್ರಯಾಣಿಕರನ್ನು ಹತ್ತಿಸುವ ಭರದಲ್ಲಿ ಪಡುಬಿದ್ರಿಯಿಂದಲೇ ಗಣೇಶ್ ಮತ್ತು ಎಪಿಎಮ್ ಬಸ್ಸುಗಳ ಪೈಪೋಟಿ ಪ್ರಾರಂಭವಾಗಿತ್ತು. ಇನ್ನೇನು ಉಚ್ಚಿಲ ಹತ್ತಿರ ಬರುತ್ತಿರುವ ನೂರಿನ್ನೂರು ಮೀಟರ್ ದೂರದಲ್ಲಿ ಎಪಿಎಂ ಬಸ್ಸು ಬುಧಿಯಾ ಪೆಟ್ರೋಲ್ ಪಂಪ್ ಎದುರುಗಡೆ ಡಿವೈಡರ್ ಏರಿದೆ. ಈ ಸಂದರ್ಭ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಇರಲಿಲ್ಲ. ಇದರಿಂದ ಸಂಭಾವ್ಯ ಅಪಘಾತವೊಂದು ತಪ್ಪಿದೆ.
ಪಡುಬಿದ್ರಿ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಎರಡೂ ಬಸ್ಸುಗಳನ್ನು ವಶಕ್ಕೆ ಪಡೆದಿದ್ದಾರೆ.

