ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ
(Kaup) ಕಾಪು: ಯತ್ನಾಳ್ ಕೂಡ ನಮ್ಮ ಪಕ್ಷದ ಮುಖಂಡರು. ಅವರ ಮನಸ್ಸಿನಲ್ಲಿ ಏನೋ ಗೊಂದಲ ಇದೆ. ಅವರ ಗೊಂದಲಕ್ಕೆ ಹೈಕಮಾಂಡ್ ಕರೆದು ಉತ್ತರ ಕೊಟ್ಟರೆ ಮುಗಿದು ಹೋಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಅವರು ಭಾನುವಾರ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ನಾನು ಕೂಡ ಹೈಕಮಾಂಡ್ ಗೆ ಒತ್ತಾಯ ಮಾಡುತ್ತೇನೆ. ಅವರ ಮನಸ್ಸಿನಲ್ಲಿರುವ ಗೊಂದಲಕ್ಕೆ ಪರಿಹಾರ ನೀಡಿದರೆ ಪಕ್ಷ ಪರಿಪೂರ್ಣವಾಗಿರುತ್ತದೆ.
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾವು ಒಗ್ಗಟ್ಟಿನಲ್ಲಿ ಇದ್ದಿದ್ದರೆ ಕಾಂಗ್ರೆಸ್ ಉರುಳಿ ಹೋಗುತ್ತಿತ್ತು. ನಮ್ಮಲ್ಲಿರುವ ಅಡೆತಡೆಗಳಿಂದ ಅವರಿಗೆ ಜೀವ ದಾನವಾಗಿದೆ. ಹೈಕಮಾಂಡ್ ಯತ್ನಾಳ್ ಅವರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕಿದೆ.
“ಬಚ್ಚ” ಹೇಳಿಕೆಗೆ ಪ್ರತಿಕ್ರಯಿಸಿದ ಛಲವಾದಿ ನಾರಾಯಣ ಸ್ವಾಮಿ, ಯಾರೂ ಯಾರನ್ನು ಕಡಿಮೆ ಮಾಡಿ ಮಾತನಾಡಬಾರದು. ಪಕ್ಷ ವಿಜಯೇಂದ್ರ ಅವರನ್ನು ಅಧ್ಯಕ್ಷ ಮಾಡಿರುತ್ತದೆ. ಬಚ್ಚ ಎಂದು ಕರೆದಾಗ ಹೈಕಮಾಂಡನ್ನು ನಿಂದಿಸಿದಂತೆ. ಇದು ಸರಿಯಾದ ಮಾತಲ್ಲ ಎಂದು ಹೇಳಿದ ಸ್ವಾಮಿ, ಇಂದು ನಾವು ಬಿಜೆಪಿಯಲ್ಲಿದ್ದು ಅಧಿಕಾರದಲ್ಲಿರುವ ಕಾಂಗ್ರೆಸ್ಸಿನ ವಿರುದ್ಧ ಹೋರಾಡಬೇಕಿದೆ. ನಮ್ಮ ನಮ್ಮಲ್ಲಿ ಗೊಂದಲ ಎಂದಾದಾಗ ನಮ್ಮ ವಿರೋಧಿ ಚಾನ್ಸ್ ಪಡೆಯುತ್ತಾರೆ. ಆದಷ್ಟು ಶೀಘ್ರವಾಗಿ ಇದಕ್ಕೆ ಪರಿಹಾರ ಸಿಗಲಿದೆ ಎಂದರು.
ನೀವು ಯಾರ ಪರ ಎಂಬ ಪತ್ರಕರ್ತರ ಪ್ರಶ್ನೆಗೆ, ನಾನು ಬಿಜೆಪಿ ಪರ ಎಂದು ಉತ್ತರಿಸಿದರು.
ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

