ಕುಂದಾಪುರ : ಬಂಧಿತ ಹಿಂದೂ ಯುವಕನ ಬಿಡುಗಡೆಗೆ ಆಗ್ರಹಿಸಿ ಶಾಸಕರ ಸಹಿತ ಹಿಂದೂ ಸಂಘಟನೆಗಳ ಠಾಣೆ ಎದುರು ಪ್ರತಿಭಟನೆ
(Kundapura) ಕುಂದಾಪುರ : ಬಂಧಿತ ಹಿಂದೂ ಯುವಕನ ಬಿಡುಗಡೆಗೆ ಆಗ್ರಹಿಸಿ ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಸಹಿತ ಹಿಂದೂ ಸಂಘಟನೆಗಳ ಸದಸ್ಯರರು ಕುಂದಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಘಟಿಸಿದೆ.
ಬಸ್ನಲ್ಲಿ ಪಯಣಿಸುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಅನ್ಯಧರ್ಮಿಯ ಯುವಕನ ನಿಲುವು ಪ್ರಶ್ನಿಸಿದ್ದ ಯುವಕನ ಮೇಲೆ ಕೇಸು ದಾಖಲಿಸಿ ಜೈಲಿಗೆ ಅಟ್ಟಲಾಗಿದೆ. ಬಸ್ನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ವಿರುದ್ಧ ಯಾವ ಕ್ರಮವು ಇಲ್ಲ, ಪೊಲೀಸರ ಈ ದಂದ್ವ ನಿಲುವು ಖಂಡನಾರ್ಹ. ಕೂಡಲೆ ಆತನನ್ನು ಬಿಡುಗಡೆಗೊಳಿಸಬೇಕು ಎಂದು ಹಿಂದೂ ಮುಖಂಡರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅನ್ಯಧರ್ಮಿಯ ಯುವಕನನ್ನು ಪ್ರಶ್ನಿಸಿದಾತನ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ. ಈತನ ವಿರುದ್ದ ಕೇಸು ದಾಖಲಿಸಿದವರು. ಅಸಭ್ಯ ವರ್ತನೆ ತೋರಿದವನ ಮೇಲೆ ಹಾಕಿಲ್ಲ. ಇಲಾಖೆ ಯಾರ ಒತ್ತಡದಡಿ ಕೆಲಸ ನಿರ್ವಹಿಸುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಂಧಿತ ಯುವಕನನ್ನು ಬಿಡುಗಡೆಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಹಿಂದೂ ಮುಖಂಡ ನೈಲಾಡಿ ಸುಧಾಕರ ಶೆಟ್ಟಿ ಮಾತನಾಡಿ, ಪೊಲೀಸರ ಕ್ರಮ ಖಂಡನಾರ್ಹ. ಪ್ರತಿದಿನವೂ ಇಂತಹ ಹತ್ತಾರು ಪ್ರಕರಣ ನಡೆಯುತ್ತಿದೆ. ಪೊಲೀಸರು ಮೊದಲು ಅನುಚಿತ ವರ್ತನೆ ಮಾಡಿರುವವನ ಮೇಲೆ ಸೊಮೋಟೊ ಕೇಸು ದಾಖಲಿಸಿ, ಮರುದಿನ ಯುವತಿಯ ಹೆತ್ತವರ ಮೂಲಕ ‘ ಬಲವಂತವಾಗಿ ಅನುಚಿತ ವರ್ತನೆ ಪ್ರಶ್ನಿಸಿದ ಯುವಕನ ಮೇಲೆ ಕೇಸು ದಾಖಲಿಸುವಂತೆ ಮಾಡಿದ್ದಾರೆ. ಕೂಡಲೆ ಆತನನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಬಜರಂಗದಳ ಮುಖಂಡ ಜಗದೀಶ್ ಕೊಲ್ಲೂರು, ಹಿಂದೂ ಪರ ಸಂಘಟನೆಯ ಪ್ರಮುಖರಾದ ಸುರೇಶ ಬಟವಾಡಿ, ಪುಷರಾಜ್ ಶೆಟ್ಟಿ ಅಂಪಾರು ಅಶೋಕ್, ಗಿರೀಶ್ ನಾಯ್ಕ ತಲ್ಲೂರು, ಶಂಕರ ಅಂಕದಕಟ್ಟೆ ರತ್ನಾಕರ ಕುಂದಾಪುರ ಮತ್ತಿತರರು ಇದ್ದರು.
